ಬಳ್ಳಾರಿ ನಗರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ನೋಂದಣಿ ಮಾಡಿಕೊಳ್ಳುತ್ತಿರುವುದು.  
ಜಿಲ್ಲೆ

‘ಗೃಹಲಕ್ಷ್ಮಿ’ಯರ ಖಾತೆಗೆ ಬಾರದ ಹಣ, ತಾಂತ್ರಿಕ ಸಮಸ್ಯೆ

ಶಶಿಧರ ಎಲ್

ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸ್ಕೀಮ್‌ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಮಹಿಳೆಯರ ಪೈಕಿ ಒಂಬತ್ತು ಸಾವಿರಕ್ಕೂ ಹೆಚ್ಚು ನಾರಿಯರ ಖಾತೆಗೆ ಆಧಾರ್ ಜೋಡಣೆ ಆಗದಿರುವುದು,

ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಹಣ ಜಮೆ ಆಗಿಲ್ಲ. ಹೀಗಾಗಿ 2 ಸಾವಿರ ರೂಪಾಯಿಗಾಗಿ ಸ್ತ್ರೀಯರು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ:

ಪ್ರತಿ ಮನೆಯ ಯಜಮಾನಿಗೆ ಮಾಸಿಕ ಎರಡು ಸಾವಿರ ರೂ. ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಆ.15ರವರೆಗೆ 2.47 ಲಕ್ಷ ಮಹಿಳಾ ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ ಈಗಾಗಲೇ 2.7 ಲಕ್ಷ ಮಹಿಳೆಯರ ಖಾತೆಗೆ ಹಣ ತಲುಪಿದೆ. ಇನ್ನೂ 20 ಸಾವಿರ ಸ್ತ್ರೀಯರ ಖಾತೆಗೆ ಶೀಘ್ರ ಹಣ ವರ್ಗಾವಣೆಗೊಳ್ಳಲಿದೆ.

ಬ್ಯಾಂಕ್ ಅಕೌಂಟ್ ಹೊಂದಾಣಿಕೆ ಆಗುತ್ತಿಲ್ಲ

ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೊಂಡಿದ್ದು, ಆನ್‌ಲೈನ್‌ನಲ್ಲಿ ಮಹಿಳಾ ಫಲಾನುಭವಿಗಳು ಸಮೀಪದ ಸೇವಾ ಕೇಂದ್ರಕ್ಕೆ ತೆರಳಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ಅದರಲ್ಲಿ ಕೆಲವರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದ ಹಿನ್ನೆಲೆಯಲ್ಲಿ ಹಣ ಬಂದಿಲ್ಲ.

ಬಳ್ಳಾರಿ ಜಿಲ್ಲೆಯಲ್ಲಿ 9,276 ಮಹಿಳೆಯರ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವುದರಿಂದ ತಾಂತ್ರಿಕ ಸಮಸ್ಯೆಯಾಗಿದೆ.

ಪ್ರತಿ ಅಂಗನವಾಡಿ ಕಾರ್ಯಕರ್ತೆಯರು ದಿನಕ್ಕೆ 50 ಜನ ಮಹಿಳೆಯರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಮಾಹಿತಿ ನೀಡಲಾಗುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಬಳ್ಳಾರಿ ತಾಲೂಕಿನಲ್ಲಿ ಅತಿಹೆಚ್ಚು ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದು, ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕುರುಗೋಡು ತಾಲೂಕು ಕೊನೆಯ ಸ್ಥಾನ ಪಡೆದಿದೆ.

ಕಾರಣವೇನು ?

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಬ್ಯಾಂಕ್ ಖಾತೆಗೆ ಸರಿಯಾಗಿ ಆಧಾರ್ ಜೋಡಣೆ ಮಾಡಿಸಿಕೊಳ್ಳದಿರುವುದು, ಕೆಲವರು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿರುವುದು, ಕೆಲವೆಡೆ ಬ್ಯಾಂಕ್ ಖಾತೆ ಸ್ಥಗಿತಗೊಂಡಿದ್ದರೂ ಫಲಾನುಭವಿಗಳಿಗೆ ಗೊತ್ತಾಗದೆ ಇರುವುದು ಕೂಡ ಯೋಜನೆಯಿಂದ ವಂಚಿತರಾಗಲು ಪ್ರಮುಖ ಕಾರಣ.

ಹಾಗಾಗಿ ಫಲಾನುಭವಿಗಳು ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಯನ್ನು ನೀಡುವುದು ಸೂಕ್ತ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಗೆ 49.58 ಕೋಟಿ ರೂ. ಬಿಡುಗಡೆ

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 49.58 ಕೋಟಿ ರೂ. ಹಣ ಜಮೆ ಮಾಡಿದ್ದು, ಈಗಾಗಲೇ 2.7 ಲಕ್ಷ ಫಲಾನುಭವಿಗಳಿಗೆ ತಲಾ ಎರಡು ಸಾವಿರ ರೂ. ಜಮೆ ಮಾಡಲಾಗಿದೆ. ಇನ್ನು 20 ಸಾವಿರ ಫಲಾನುಭವಿಗಳ ಖಾತೆಗೆ ಶೀಘ್ರವೇ ಹಣ ಜಮೆ ಆಗಲಿದ್ದು, ಆ.16ರ ನಂತರ ನೋಂದಣಿ ಮಾಡಿಸಿಕೊಂಡಿರುವ 20 ಸಾವಿರ ಮಹಿಳಾ ಫಲಾನುಭವಿಗಳ ಪಟ್ಟಿ ಸರ್ಕಾರಕ್ಕೆ ತಲುಪಿದೆ.

ಜಿಲ್ಲೆಯಲ್ಲಿ 3.45 ಲಕ್ಷ ಮಹಿಳೆಯರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಪ್ರಯೋಜನ ಪಡೆದುಕೊಳ್ಳುವ ಮಹಿಳೆಯರ ಸಂಖ್ಯೆ 3.45 ಲಕ್ಷ ಇದೆ. ಅದರಲ್ಲಿ 26,191 ಅಂತ್ಯೋದಯ ಕಾರ್ಡ್, 2,75,309 ಬಿಪಿಎಲ್ ಕಾರ್ಡ್ ಹಾಗೂ 43,786 ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿಯರಿದ್ದಾರೆ.

ಬಳ್ಳಾರಿ ನಗರ ವ್ಯಾಪ್ತಿಯಲ್ಲಿ 1,00,544, ಬಳ್ಳಾರಿ ಗ್ರಾಮೀಣ 55,889, ಸಂಡೂರು 57,994, ಸಿರಗುಪ್ಪ 69,361, ಕುರುಗೋಡು 28,498 ಹಾಗೂ ಕಂಪ್ಲಿ 33,000 ಫಲಾನುಭವಿಗಳಿದ್ದಾರೆ ಎಂಬುದು ಇಲಾಖೆ ಮಾಹಿತಿ.

ಅಲೆದಾಟ ತಪ್ಪಿಸಲು ಕ್ರಮ

ಕಚೇರಿಗೆ ಮಹಿಳೆಯರ ಅಲೆದಾಟ ತಪ್ಪಿಸಲು ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಜಿಲ್ಲೆಯ 151 ಗ್ರಾಮ ಒನ್ ಸೇವಾ ಕೇಂದ್ರ, 10 ಕರ್ನಾಟಕ ಒನ್, 100 ಬಾಪೂಜಿ ಸೇವಾ ಕೇಂದ್ರ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ವಾರು ನ್ಯಾಯಬೆಲೆ ಅಂಗಡಿಯಲ್ಲಿ ಒಟ್ಟು 75 ಕೇಂದ್ರಗಳನ್ನು ತೆರೆಯಲಾಗಿದೆ.

ಅಲ್ಲದೆ ಪ್ರಜಾಪ್ರತಿನಿಧಿಗಳನ್ನು ನಿಯೋಜಿಸಲಾಗುತ್ತಿದ್ದು, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 9276 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸೇರಿದಂತೆ ಅನೇಕ ತಾಂತ್ರಿಕ ಸಮಸ್ಯೆಗಳಿದ್ದು, ಅದನ್ನು ಬಗೆಹರಿಸಲು ಈಗಾಗಲೇ ಸೂಚನೆ ನೀಡಲಾಗಿದೆ. | ವಿಜಯಕುಮಾರ್, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ