ಜಿಲ್ಲೆ

ನಾಳೆ 198 ವಾರ್ಡ್‌ಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

ಹರೀಶ್​​ ಕೆ.ಸಿ.

ಬೆಂಗಳೂರು:ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಯಜಮಾನಿ ಖಾತೆಗೆ ತಿಂಗಳಿಗೆ 2 ಸಾವಿರ ರೂ.ನಗದು ಹಾಕುವ ವ್ಯವಸ್ಥೆ ಬುಧವಾರ(ಆ.30) ಅನಷ್ಠಾನಕ್ಕೆ ಬರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಟೌನ್‌ಹಾಲ್‌ನಲ್ಲಿ ಮುಖ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಯೋಜನೆಯಡಿ ಬೆಂಗಳೂರು ನಗರದಲ್ಲಿ ಈಗಾಗಲೇ ಅಂದಾಜು 6.16 ಲಕ್ಷ ಫಲಾನುಭವಿಗಳು ಹೆಸರು ನೊಂದಾಯಿಸಿಕೊಂಡಿದ್ದಾರೆ.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೈಸೂರಿನಲ್ಲಿ ಯೋಜನೆಗೆ ಚಾಲನೆ ನೀಡಲಿದೆ. ಇದೇ ವೇಳೆ ರಾಜ್ಯದ 11 ಸಾವಿರ ಸ್ಥಳಗಳಲ್ಲಿ ವರ್ಚುವಲ್ ವೀಡಿಯೋ ಮೂಲಕ ಏಕಕಾಲಕ್ಕೆ ಚಾಲನೆ ಸಿಗಲಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಹಾಕುವ ಕಾರ್ಯಕ್ರಮ ನಿಗದಿಪಡಿಸಲಾಗಿದೆ. ವಾರ್ಡ್‌ಗಳಲ್ಲಿ ಕಾರ್ಯಕ್ರಮದ ನೇರ ವೀಕ್ಷಣೆ ಟಿವಿ, ಎಲ್ಇಡಿ ಪರದೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆಸನ, ಶೌಚಗೃಹ, ಕುಡಿಯುವ ನೀರು, ವಿದ್ಯುತ್ ಹಾಗೂ ಅಂರ್ತಜಾಲ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಯೋಜನೆ ಕುರಿತು ಕರಪತ್ರ ವಿತರಿಸಬೇಕು. ಕಾರ್ಯಕ್ರಮದ ಮೇಲುಸ್ತುವಾರಿಯನ್ನು ವಲಯ ಜಂಟಿ ಆಯುಕ್ತರು, ಉಪ ಆಯುಕ್ತರು ಹಾಗೂ ಮುಖ್ಯ ಅಭಿಯಂತರರಿಗೆ ವಹಿಸಲಾಗಿದೆ. ಮೇಲ್ವಿಚಾರಣೆಗಾಗಿ ಪ್ರತಿ ವಾರ್ಡ್‌ಗೆ ನೋಡಲ್ ಅಧಿಕಾರಿ ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.

ಗುರುತಿಸಿರುವ ಸ್ಥಳಗಳ ವಿವರ:

ಪೂರ್ವ    44

ಪಶ್ಚಿಮ     44

ದಕ್ಷಿಣ 44

ಬೊಮ್ಮನಹಳ್ಳಿ 16

ಮಹದೇವಪುರ 17

ಯಲಹಂಕ 11

ದಾಸರಹಳ್ಳಿ 08

ರಾಜರಾಜೇಶ್ವರಿ ನಗರ 14