ಜಿಲ್ಲೆ

ಗೃಹಜ್ಯೋತಿ ನೋಂದಣಿ ಶೇ.94 ಸಾಧನೆ

3.33 ಲಕ್ಷ ಗ್ರಾಹಕರಿಗೆ ಯೋಜನೆಯ ಲಾಭ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 3,12,778 ಗೃಹ ಬಳಕೆಯ ವಿದ್ಯುತ್ ಮೀಟರ್‌ಗಳ ನೋಂದಣಿಯೊಂದಿಗೆ ಶೇ.94ರಷ್ಟು ಸಾಧನೆಯಾಗಿದೆ.
ಜಿಲ್ಲೆಯಲ್ಲಿ 3,37,854 ಗೃಹ ಬಳಕೆಯ ವಿದ್ಯುತ್ ಮೀಟರ್‌ಗಳಿದ್ದು, ಇದರಲ್ಲಿ 3,33,261 ಮೀಟರ್‌ಗಳು ಯೋಜನೆಗೆ ಅರ್ಹ ಎಂದು ಗುರುತಿಸಲಾಗಿದೆ. ಇದಕ್ಕೆ ಕಳೆದ 2023ನೇ ಸಾಲಿನ ಆಗಸ್ಟ್‌ನಿಂದ 2024ರ ಜುಲೈ ಅಂತ್ಯವರೆಗೆ ಲಾನುಭವಿಗಳಿಗೆ 135.56 ಕೋಟಿ ರೂ. ರಿಯಾಯಿತಿ ಸಿಕ್ಕಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರವು 200 ಯುನಿಟ್ ಒಳಗಿನ ವಿದ್ಯುತ್ ಬಳಕೆ ಮಾಡುವ ಮನೆಗಳಿಗೆ ವಿದ್ಯುತ್ ಬಿಲ್ ಮನ್ನಾ ೋಷಿಸಿದೆ. ಇದು ಈಗಾಗಲೇ ಅನುಷ್ಠಾನದಲ್ಲಿದ್ದು ತಾಂತ್ರಿಕ ಸಮಸ್ಯೆಗಳಿಂದ ಕೆಲವರು ಸೌಲಭ್ಯದಿಂದ ವಂಚಿತರಾಗಿದ್ದಾರೆ.


ನೋಂದಣಿಯಾಗದ ಗ್ರಾಹಕರು
ಜಿಲ್ಲೆಯಲ್ಲಿ 3,118 ಗೃಹ ಬಳಕೆಯ ವಾಟರ್ ಪಂಪು ಮೀಟರ್‌ಗಳು, ಹೊಸ ಮೀಟರ್‌ಗಳು 2,238, ಸ್ವಯಂಪ್ರೇರಿತರಾಗಿ ನೋಂದಣಿಗೊಳ್ಳದ 4,517 ಮೀಟರ್‌ಗಳಿವೆ. ಇದರ ನಡುವೆ ವಿದ್ಯುತ್ ಮೀಟರ್ ನೋಂದಾಯಿತ 10,610 ಮನೆಗಳು ಖಾಲಿ ಇವೆ. ಇದಕ್ಕೆ ರಿಯಾಯಿತಿ ಬಿಲ್ ಸೌಲಭ್ಯವೂ ಸಿಗುತ್ತಿಲ್ಲ.


ತಾಲೂಕುವಾರು ವೆಚ್ಚ
ಗೃಹಜ್ಯೋತಿ ಯೋಜನೆಯಡಿ ಹೆಚ್ಚಿನ ರಿಯಾಯಿತಿ ಪಡೆಯುತ್ತಿರುವ ತಾಲೂಕುಗಳಲ್ಲಿ ಗೌರಿಬಿದನೂರು ಪ್ರಥಮ, ಚಿಂತಾಮಣಿ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಒಂದು ವೇಳೆ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮನೆಯ ಮಾಲೀಕರು ಬೇರೆ ಮನೆಯನ್ನು ಬಾಡಿಗೆ ಪಡೆದುಕೊಂಡ ಬಳಿಕವೂ ನಿಗದಿತ ದಾಖಲೆಗಳನ್ನು ಸಲ್ಲಿಸಿ ಸೌಲಭ್ಯವನ್ನು ಪಡೆಯಬಹುದಾಗಿದೆ.


ವಿದ್ಯುತ್ ಬಳಕೆ ಹೆಚ್ಚಳ
ಮನೆಯಲ್ಲಿ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಳದ ನಡುವೆ ಶುಲ್ಕವೂ ಹೆಚ್ಚಾಗುತ್ತಿದ್ದು ಹಲವರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಮತ್ತೆ ಅನೇಕರಿಗೆ ಹೆಚ್ಚುವರಿ ವಿದ್ಯುತ್ ಬಳಕೆಯ ಶುಲ್ಕದ ಬಿಲ್ ಬರುತ್ತಿದೆ. ಇದು ಅಲ್ಪ ಪ್ರಮಾಣದಲ್ಲಿರುವುದರಿಂದ ತಲೆಕೆಡಿಸಿಕೊಳ್ಳುತ್ತಿಲ್ಲ. ಇದೇ ವೇಳೆ ಮುಂದಿನ ತಿಂಗಳಲ್ಲಿ ಮಿತ ಬಳಕೆಯ ಬುದ್ಧಿವಂತಿಕೆಯನ್ನು ಪ್ರದರ್ಶಿಸಲಾಗುತ್ತಿದೆ.

"ಮೊದಲು ಗೃಹಜ್ಯೋತಿ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಶುಲ್ಕ ರಿಯಾಯಿತಿ ಸಿಗುತ್ತಿತ್ತು. ಆದರೆ, ಮನೆಯಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ಅನುಗುಣವಾಗಿ ವಿದ್ಯುತ್ ಯುನಿಟ್ ಪ್ರಮಾಣವೂ ಹೆಚ್ಚಳವಾಗಿದೆ. ಇದಕ್ಕೆ ಹೆಚ್ಚುವರಿ ದರದ ಬಿಲ್ ಪಾವತಿಸುವಂತಾಗಿದೆ. ಇದು ಕಡಿಮೆ ಇದ್ದು ಹೆಚ್ಚಿನ ಹೊರೆ ಇಲ್ಲ ಎನ್ನುವುದು ತೃಪ್ತಿದಾಯಕ."
ರಾಜು, ಗ್ರಾಹಕ, ಚಿಕ್ಕಬಳ್ಳಾಪುರ