ಜಿಲ್ಲೆ

ಕಂಪನಿಗಳಿಗೇ ಬೆಳೆವಿಮೆ ಫಸಲು!

kumarvrl

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಂಡಿರುವ ಬೆಳೆವಿಮೆ ಯೋಜನೆ ಬಗ್ಗೆ ಪ್ರತಿ ವರ್ಷ ಆಕ್ಷೇಪಗಳು ಕೇಳಿಬರುತ್ತಲೇ ಇವೆ. ಬೆಳೆ ನಷ್ಟ ಸಂದರ್ಭ ರೈತರಿಗೆ ನೆರವಾಗುವ ಉದ್ದೇಶದಿಂದ ಆರಂಭಗೊಂಡಿರುವ ಈ ಯೋಜನೆ, ನಿರ್ವಹಣೆಯಲ್ಲಿ ಉದಾಸೀನ, ಬಳಕೆಯಲ್ಲಿ ನಿರ್ಲಕ್ಷ್ಯದಿಂದಾಗಿ ಅನ್ನದಾತರಿಗೆ ಲಾಭ ತರುತ್ತಿಲ್ಲ. ಬದಲಿಗೆ ವಿಮಾ ಕಂಪನಿಗಳು ಕೋಟ್ಯಂತರ ರೂ. ಜೇಬಿಗಿಳಿಸುತ್ತಿವೆ. ಲಭ್ಯ ಮಾಹಿತಿ ಪ್ರಕಾರ 2016ರಿಂದ ಈವರೆಗೆ ಅಂದರೆ, ನಾಲ್ಕೇ ವರ್ಷದಲ್ಲಿ ವಿಮಾ ಕಂಪನಿಗಳಿಗೆ ಕಂತಿನ ರೂಪದಲ್ಲಿ ಬರೋಬ್ಬರಿ 7,546.29 ಕೋಟಿ ರೂ. ಸಂದಾಯವಾಗಿದೆ. ಆದರೆ, ರೈತರಿಗೆ ವಾಪಸ್ ಸಿಕ್ಕಿರುವುದು 5,767.94 ಕೋಟಿ ರೂ. ಮಾತ್ರ. ರಾಜ್ಯದಲ್ಲಿ ಸತತ ಬರ, ಒಮ್ಮೆ ಅತಿವೃಷ್ಟಿಯಿಂದ ಬೇಸಾಯಗಾರರಿಗೆ ದೊಡ್ಡ ನಷ್ಟವಾದರೂ ಬೆಳೆ ವಿಮೆಯಿಂದ ನಿರೀಕ್ಷಿತಮಟ್ಟದಲ್ಲಿ ಪರಿಹಾರ ಸಿಕ್ಕಿಲ್ಲ. ಆದರೆ, ನಾಲ್ಕೈದು ವಿಮಾ ಕಂಪನಿಗಳಿಗೆ 1778.35 ಕೋಟಿ ರೂ. ಲಾಭವಾಗಿದೆ.

ವಿಫಲತೆ ಎಲ್ಲಿ?: ವಿಮೆ ಹಣವನ್ನು ರೈತರು ಹೇಗೆ ಪಡೆಯಬೇಕು? ಯಾವಾಗ ಸಿಗಲಿದೆ? ವಿಮೆ ಹಣ ರೈತರಿಗೆ ಸಿಗಲು ವ್ಯವಸ್ಥೆಯಲ್ಲಿ ಯಾರ ಜವಾಬ್ದಾರಿ ಎಷ್ಟಿದೆ? ಎಂಬುದು ನಿಯಮಾವಳಿಯಲ್ಲಿ ಸ್ಪಷ್ಟವಾಗಿದೆ. ಆದರೆ, ಅವರವರ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲತೆ ಎದ್ದು ಕಾಣುತ್ತಿದೆ. ಪರಿಣಾಮ ಸರ್ಕಾರ ಕಟ್ಟುವ ತನ್ನ ಪಾಲಿನ ಹಣ ಹಾಗೂ ರೈತರು ಕಟ್ಟುವ ವಿಮಾ ಕಂತು ಕಂಪನಿಗಳ ಪಾಲಾಗುತ್ತಿದೆ. ಪ್ರಮುಖವಾಗಿ ವಿಮೆ ಕೊಡಿಸುವಲ್ಲಿ ರಾಜ್ಯ ಸರ್ಕಾರ ಅಷ್ಟಾಗಿ ಗಮನ ಹರಿಸದೇ ಇರುವುದೂ ಇಷ್ಟಕ್ಕೆಲ್ಲ ಕಾರಣ.

ಅತಿವೃಷ್ಟಿ ವೇಳೆ ಅಪಾರ ನಷ್ಟ: 2019ರ ಆಗಸ್ಟ್​ನಲ್ಲಿ ಕಾಣಿಸಿದ ಅತಿವೃಷ್ಟಿ, ಪ್ರವಾಹದಿಂದ ದೊಡ್ಡ ಮಟ್ಟದಲ್ಲಿ ಬೆಳೆ ಹಾನಿಯಾಯಿತು. ಆದರೆ, ವಿಮೆ ಕಟ್ಟಿದವರಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ನಿಯಮದ ಪ್ರಕಾರ ಕಂಪನಿಗಳು ಘಟನೆ ನಡೆದ 15 ದಿನಗಳಲ್ಲೇ ಮಧ್ಯಂತರ ಪರಿಹಾರ ಮೊದಲು ವಿತರಿಸಬೇಕು. ಬಳಿಕ ನಿಗದಿತ ಅವಧಿಯ ಕೊನೆಯಲ್ಲಿ ಬಾಕಿ ಮೊತ್ತ ನೀಡಬೇಕು. ಈ ಕೆಲಸ ಆಗಿಲ್ಲ. ಸರ್ಕಾರವೂ ಜವಾಬ್ದಾರಿ ನಿರ್ವಹಿಸಲಿಲ್ಲ.

ಇದರ ಜತೆಗೆ ಮರು ವಿನ್ಯಾಸಗೊಳಿಸಲಾದ (ವಾಣಿಜ್ಯ ಬೆಳೆ) ಹವಾಮಾನ ಆಧಾರಿತ ವಿಮೆ ಯೋಜನೆಯನ್ನು 2016ರ ಮುಂಗಾರು ಹಂಗಾಮಿನಿಂದ ತೋಟಗಾರಿಕೆ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ 2016ರಿಂದ 2019ರ ಹಿಂಗಾರುವರೆಗೆ ರೈತರಿಂದ 211.12 ಕೋಟಿ ರೂ., ರಾಜ್ಯ ಸರ್ಕಾರದಿಂದ 456.96 ಕೋಟಿ ರೂ., ಕೇಂದ್ರ ಸರ್ಕಾರದಿಂದ 456.96 ಕೋಟಿ ರೂ. ಪಾವತಿಯಾಗಿದೆ.

ಸಿಕ್ಕಿದ್ದೆಷ್ಟು?

2019ರ ಮುಂಗಾರು ಹಂಗಾಮಿನಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಬೆಳೆಗಳಿಗೆ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಮಧ್ಯಂತರ ಪರಿಹಾರ ಒದಗಿಸಲು ಜಿಲ್ಲಾಡಳಿತಗಳು ನೀಡಿರುವ ವರದಿಯಂತೆ ಹಾವೇರಿ, ವಿಜಯಪುರ, ಗದಗ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳ 1194 ವಿಮಾ ಘಟಕಗಳು ಒಳಪಟ್ಟಿವೆ. ಅನುಷ್ಠಾನ ವಿಮಾ ಸಂಸ್ಥೆಯವರು 2020ರ ಫೆ.12,13ರಂದು 327 ವಿಮಾ ಘಟಕಗಳಲ್ಲಿನ 56184 ಫಲಾನುಭವಿಗಳಿಗೆ ಮಧ್ಯಂತರ ವಿಮಾ ಪರಿಹಾರವಾಗಿ 32.37 ಕೋಟಿ ರೂ.ಗಳನ್ನು ‘ಸಂರಕ್ಷಣೆ ಪೋರ್ಟಲ್’ ಮೂಲಕ ಇತ್ಯರ್ಥಪಡಿಸಿದ್ದಾರೆ. ಬಾಕಿ ಮೊತ್ತ ಇತ್ಯರ್ಥದ ಪ್ರಕ್ರಿಯೆ ನಡೆದಿದೆ.

ಪರಿಹಾರದ ದಾರಿ

ಬಿತ್ತನೆಯಾಗಿ ಒಂದು ತಿಂಗಳು ಮತ್ತು ಬೆಳೆ ಕಟಾವಿಗಿಂತ 15 ದಿನ ಮುಂಚಿತವಾಗಿ ಹಾನಿಗೊಳಪಟ್ಟರೆ ಪರಿಹಾರಕ್ಕೆ ಅರ್ಹ. ಯಾವುದೇ ಹವಾಮಾನ ವೈಪರಿತ್ಯ ಉಂಟಾದ 7 ದಿನದೊಳಗೆ ಡಿಸಿ ಸಮಿತಿ ಸಭೆ ನಡೆಸಬೇಕು. ಒಂದು ವಿಮಾ ಘಟಕದಲ್ಲಿ ಶೇ.5 ಬಿತ್ತನೆ ಕ್ಷೇತ್ರದಲ್ಲಿ 10 ವಿವಿಧ ಸ್ಥಳದ ಮೌಲ್ಯಮಾಪನವನ್ನು ಸಭೆ ನಡೆದ 7 ದಿನದೊಳಗೆ ನಡೆಸಬೇಕು. ಕೂಡಲೆ ನಿಗದಿತ ನಮೂನೆಯಲ್ಲಿ ನಷ್ಟದ ಮೌಲ್ಯಮಾಪನ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಬೇಕು. ನಂತರ ವಿಮಾ ಪರಿಹಾರ ಲೆಕ್ಕಾಚಾರ ಹಾಕಬೇಕು. ಲೆಕ್ಕಾಚಾರ ಹಾಕಿದ 15 ದಿನದೊಳಗೆ ವಿಮಾ ಸಂಸ್ಥೆಯವರು ಪರಿಹಾರವನ್ನು ಇತ್ಯರ್ಥಪಡಿಸಬೇಕಾಗುತ್ತದೆ.

ನಿಯಮದಲ್ಲಿ ಏನಿದೆ?

ಬೆಳೆ ಕಟಾವಿಗೆ ಮೊದಲು ಹವಾಮಾನ ವೈಪರಿತ್ಯದ ಸಂದರ್ಭ ಮಧ್ಯಂತರ ವಿಮಾ ಪರಿಹಾರ ನೀಡಲು (ಆನ್ ಅಕೌಂಟ್ ಪೇಮೆಂಟ್ ಡ್ಯೂ ಟು ಮಿಡ್ ಸೀಸನ್ ಅರ್ಡÌಟಿ) ಅವಕಾಶಗಳಿವೆ. ಇದಕ್ಕೊಂದಿಷ್ಟು ನಿಯಮ, ಕಾಲಮಿತಿಗಳಿವೆ. ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾಮಾನ ಏರುಪೇರುಗಳಾದ ಹೆಚ್ಚಿನ ಮಳೆ, ನೆರೆ ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಂದ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಇಳುವರಿಯು ಸಾಮಾನ್ಯ ಇಳುವರಿಯ ಶೇ.50ಕ್ಕಿಂತ ಕಡಿಮೆ ಇದ್ದರೆ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮೆ ನಷ್ಟ ಪರಿಹಾರದಲ್ಲಿ ಶೇ.25 ಹಣವನ್ನು ಮುಂಚಿತವಾಗಿ ವಿಮಾ ಸಂಸ್ಥೆ ನೀಡತಕ್ಕದ್ದು. ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಬೆಳೆ ಇಳುವರಿ ಮಾಹಿತಿ ಬಂದ ನಂತರ ಅಂತಿಮ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈ ಹಣ ಹೊಂದಾಣಿಕೆ ಮಾಡತಕ್ಕದ್ದು ಎಂದು ತಿಳಿಸಲಾಗಿದೆ.

ಜವಾಬ್ದಾರಿ ಯಾರದ್ದು?

ಬೆಳೆ ಹಾನಿ ವರದಿ ನೀಡಲು ಜಿಲ್ಲಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನೋಡಲ್ ಅಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಹವಾಮಾನ ವೈಪರಿತ್ಯ, ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿ ಉಂಟಾದ ಸಂದರ್ಭದಲ್ಲಿ ಅವಶ್ಯಕತೆಗೆ ತಕ್ಕಂತೆ ನಿರ್ಧಾರ ಕೈಗೊಳ್ಳಬಹುದು.

ಮುಂಗಾರು ಹಂಗಾಮು ಮುಗಿದು 4-5 ತಿಂಗಳು ಕಳೆದಿದೆ. ಸರ್ಕಾರ ಸರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರೆ ಈ ಬಾರಿ ರೈತರಿಗೆ 2,500 ಕೋಟಿ ರೂ.ಗಿಂತ ಹೆಚ್ಚು ಪರಿಹಾರ ಸಿಗುತ್ತಿತ್ತು. ಈ ಬಾರಿ ಅತಿ ಹೆಚ್ಚು ಪ್ರಿಮಿಯಂ ಕೂಡ ಕಟ್ಟಲಾಗಿತ್ತು. ಆದರೆ ಪರಿಹಾರ ಸಿಕ್ಕಿರುವುದು 32 ಕೋಟಿ ರೂ. ಮಾತ್ರ. ಜವಾಬ್ದಾರಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. | ಕೃಷ್ಣ ಬೈರೇಗೌಡ ಮಾಜಿ ಸಚಿವ

ಶ್ರೀಕಾಂತ್ ಶೇಷಾದ್ರಿ