ಚಿತ್ರದುರ್ಗ: ಸ್ಥಾನ ಸಿಗುತ್ತಿದ್ದಂತೆ ಹೆತ್ತವರನ್ನು ಮರೆಯುವವರು ನೀಚರು. ನಾನು ದೇವರಿಗೆ ಕೈ ಮುಗಿಯುವುದಿಲ್ಲ. ನನಗೆ ತಂದೆ, ತಾಯಿಯೇ ದೇವರು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಮಾದಾರ ಚನ್ನಯ್ಯ ಶ್ರೀಗಳ ಪೂರ್ವಾಶ್ರಮದ ತಾಯಿ ಗಂಗಮ್ಮ ಅವರ ಕೈಲಾಸ ಶಿವಗಣಾರಾಧನೆ ಹಿನ್ನೆಲೆಯಲ್ಲಿ ಹೊಳಲ್ಕೆರೆ ತಾಲೂಕು ಹಿರೇಕಂದವಾಡಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರ್ವ ಶರಣರ ಸಮ್ಮೇಳನದಲ್ಲಿ ಮಾತನಾಡಿದರು.
ಜನ್ಮನೀಡಿದವರನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ವೈಯಕ್ತಿಕವಾಗಿ ನಮಗೆ ಒಳಿತು ಆಗಲಿದೆ. ಅವರ ಋಣ ತೀರಿಸಲು ನಮ್ಮಿಂದ ಸಾಧ್ಯವಾಗದಿದ್ದರೂ ಅವರ ಆರೈಕೆಯಲ್ಲಿ ಸಣ್ಣ ಸೇವೆ ಮಾಡಿದ ತೃಪ್ತಿ ಕಂಡುಕೊಳ್ಳಬಹುದು ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಸೂರ‌್ಯ, ಚಂದ್ರ ಹಾಗೂ ತಾಯಿಗೆ ಅವರವರೇ ಸಾಟಿ ಎಂದು ಹೇಳಿದರು.
ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಬಸವಮೂರ್ತಿ ಸ್ವಾಮೀಜಿ ಎಂಬ ಮೂರ್ತಿಯನ್ನು ಗಂಗಮ್ಮ ಸಮಾಜಕ್ಕೆ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಮಾಜ, ಧರ್ಮದ ಅಭಿವೃದ್ಧಿಗೆ ಮಾದಾರ ಶ್ರೀಗಳು ಶ್ರಮಿಸುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಹಾರ ಸಚಿವ ಕೆ.ಎಸ್.ಮುನಿಯಪ್ಪ ಮಾತನಾಡಿ, ತಾಯಿಯ ಸ್ಥಾನ ಅತ್ಯಂತ ಪವಿತ್ರವಾದದ್ದು, ಅವರ ಆಶೀರ್ವಾದ ದೇವರಿಗಿಂತಲೂ ಮಿಗಿಲಾದದ್ದು ಎಂದು ಹೇಳಿದರು.
ವಿಶ್ರಾಂತ ಮುಖ್ಯನ್ಯಾಯಮೂರ್ತಿ ನಾರಾಯಣಸ್ವಾಮಿ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ಮಾಜಿ ಹಣಕಾಸು ಸಚಿವ ಎಂ.ಶಿವಣ್ಣ, ಮಾಜಿ ಶಾಸಕ ಎ.ವಿ.ಉಮಾಪತಿ, ಹಿರಿಯೂರು ಜಿ.ಎಸ್.ಮಂಜುನಾಥ್, ಕೆ.ಇ.ಕಾಂತೇಶ್, ಜಿ.ಎಸ್.ಅನಿತ್‌ಕುಮಾರ್, ಡಾ.ಬಿ.ತಿಪ್ಪೇಸ್ವಾಮಿ, ಐಪಿಎಸ್‌ಅಧಿಕಾರಿ ಕವಿತಾ, ನಿವೃತ್ತ ಐಎಎಸ್ ಅಧಿಕಾರಿಗಳಾದ ಲಕ್ಷ್ಮಿನಾರಾಯಣ, ಅನಿಲ್‌ಕುಮಾರ್ ಪಾಲ್ಗೊಂಡಿದ್ದರು.