ಹೊಸದುರ್ಗ: ತಾಲೂಕಿನ ಬೊಕೀಕೆರೆ, ಹೊನ್ನೇಕೆರೆ, ಶಿವನೇಕಟ್ಟೆ ಗ್ರಾಮಗಳ ತೆಂಗಿನ ತೋಟಗಳಿಗೆ ತಗುಲಿರುವ ಕಪ್ಪು ತಲೆ ಹುಳ ಹಾಗೂ ಬೆಂಕಿ ರೋಗದ ಕುರಿತು ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಳ್ಳಲು ಹಾಗೂ ಗೋನಿಯೋಜಸ್ ಪರೋಪ ಜೀವಿ ಬಿಡುಗಡೆಗೆ ಮಂಗಳವಾರ ರೈತರ ತೋಟಗಳಿಗೆ ಭೇಟಿ ನೀಡಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ರೈತರ ವಿರೋಧ ಎದುರಿಸಬೇಕಾಯಿತು.
ತೋಟಗಳಲ್ಲಿ ರೋಗ ಹೆಚ್ಚಾಗಿ ದಿನದಿಂದ ದಿನಕ್ಕೆ ತೆಂಗು ಬೆಳೆ ಹಾಳಾಗುತ್ತಿದ್ದು, ಸಮಸ್ಯೆ ನಿಯಂತ್ರಿಸುವಲ್ಲಿ ಅಧಿಕಾರಿಗಳು, ವಿಜ್ಞಾನಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ತೋಟಗಾರಿಕೆ ವಿಜ್ಞಾನಿ ಪ್ರಕಾಶ್ ಮಾತನಾಡಿ, ಕಪ್ಪು ತಲೆ ಹುಳಗಳ ಹತೋಟಿಗೆ ಆರಂಭಿಕ ಹಂತದಲ್ಲೇ ಕ್ರಮ ವಹಿಸಬೇಕು. ಎಲ್ಲ ತೆಂಗಿನ ಮರಗಳಿಗೂ ಔಷಧೋಪಚಾರ ನಡೆಸುವ ಅನಿವಾರ್ಯತೆ ಇದೆ. ಪ್ರತಿ ಮರಕ್ಕೂ ಔಷಧಿ ಸಿಂಪಡಿಸುವ ಮೂಲಕ ತೆಂಗಿನ ಮರಗಳನ್ನು ರಕ್ಷಿಸಬಹುದಾಗಿದೆ. ರೈತರು ಸಾಮೂಹಿಕವಾಗಿ ರೋಗ ನಿಯಂತ್ರಣಕ್ಕೆ ಪ್ರಯತ್ನಿಸಿದರೆ ಮಾತ್ರ ಹತೋಟಿ ಮಾಡಬಹುದು ಎಂದರು.
ಕೃಷಿ ಸಮಾಜದ ನಿರ್ದೇಶಕ ಶಿವಮೂರ್ತಿ ಮಾತನಾಡಿ, ರೋಗ ನಿಯಂತ್ರಣದಲ್ಲಿ ತೋಟಗಾರಿಕೆ ಇಲಾಖೆ ವಿಫಲವಾಗಿದೆ. ತೋಟಗಳಿಗೆ ಭೇಟಿ ನೀಡಿ ರೋಗ ಕುರಿತು ರೈತರಿಗೆ ಮಾಹಿತಿ ನೀಡುವಲ್ಲಿ, ಪರಿಹಾರ ಕ್ರಮ ಸೂಚಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ತೆಂಗಿನ ತೋಟ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನಾದರೂ ತೋಟಗಳ ಸಂರಕ್ಷಣೆಗೆ ಇಲಾಖೆ ಮುಂದಾಗಬೇಕು ಎಂದು ತಿಳಿಸಿದರು.
ಕಪ್ಪು ತಲೆ ಹುಳದ ಬಾದೆಯಿಂದ ಹಾಳಾದ ತೋಟಗಳ ನಿರ್ವಹಣೆ ಹಾಗೂ ರೋಗದ ಹತೋಟಿಗೆ ಸರ್ಕಾರ ನೀಡಿದ ಸಹಾಯಧನವನ್ನು ಶ್ರೀರಾಂಪುರ ಹೋಬಳಿಗೆ ಮಾತ್ರ ಸೀಮಿತಗೊಳಿಸಿ ವಿತರಿಸಲಾಗಿದೆ. ಕಸಬಾ ಹೋಬಳಿಯ ಬಹುತೇಕ ತೋಟಗಳು ರೋಗಕ್ಕೆ ಸಿಲುಕಿವೆ. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ತಾಲೂಕಿನ ಎಲ್ಲ ತೆಂಗು ಬೆಳೆಗಾರರಿಗೂ ಸೌಲಭ್ಯ ಒದಗಿಸಿ ರೋಗ ಹತೋಟಿಗೆ ತರುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆ ಸರ್ಕಾರದ ಅನುದಾನದಲ್ಲಿ ತೆಂಗಿನ ಮರಗಳಿಗೆ ಔಷಧಿ ಸಿಂಪಡಿಸಬೇಕು. ಈ ಕುರಿತು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸ್ಥಳದಲ್ಲಿದ್ದ ರೈತರು ಅಧಿಕಾರಿಗಳನ್ನು ಒತ್ತಾಯಿಸಿದರು.
ತೋಟಗಾರಿಕೆ ಅಧಿಕಾರಿಗಳಾದ ಶೋಭಾ, ವೆಂಕಟೇಶ್, ನರಸಿಂಹಮೂರ್ತಿ, ಕೃಷಿಕರಾದ ಮಾಚೇನಹಳ್ಳಿ ಬಸಣ್ಣ, ಚಿದಾನಂದ್, ಬಂಗಾರಪ್ಪ, ಮಂಜಪ್ಪ, ಅರೆ ತಿಮ್ಮಪ್ಪ ಇತರರಿದ್ದರು.