ಹುಣಸೂರು ನಗರದಲ್ಲಿ ತಾಳೆಬೆಳೆ ಯೋಜನೆಯ ಮೆಗಾಡ್ರೈವ್ ಕಾರ್ಯಕ್ರಮದಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಅವರು ರೈತರಿಗೆ ತಾಳೆ ಗಿಡಗಳನ್ನು ವಿತರಿಸಿದರು. ಎಚ್.ಬಿ.ವಿಜಯಕುಮಾರ್, ಎಚ್.ನಾಗರಾಜು, ಗಣೇಶ್ ಕುಮಾರಸ್ವಾಮಿ ಇತರರಿದ್ದರು. 
ಜಿಲ್ಲೆ

ತಾಳೆ ಬೆಳೆದು ಆರ್ಥಿಕವಾಗಿ ಸದೃಢರಾಗಿರಿ

ಹುಣಸೂರು: ದೇಶದಲ್ಲಿ ತಾಳೆ ಎಣ್ಣೆ ಖಾದ್ಯ ತೈಲಕ್ಕೆ ವಾರ್ಷಿಕ 236 ಲಕ್ಷ ಟನ್‌ಗಳ ಬೇಡಿಕೆಯಿದ್ದು, ಪ್ರಸ್ತುತ ಖಾದ್ಯ ತೈಲದ ಉತ್ಪಾದನೆ ಕೇವಲ 70 ರಿಂದ 80ಲಕ್ಷ ಟನ್ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿದೇರ್ಶಕರ ಕಚೇರಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ತಾಳೆ ಬೆಳೆ ಯೋಜನೆಯ ಮೆಗಾಡ್ರೈವ್ ಕಾರ್ಯಕ್ರಮದಲ್ಲಿ ರೈತರಿಗೆ ತಾಳೆ ಗಿಡ ವಿತರಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪೂರೈಕೆ ಕಡಿಮೆ ಇರುವುದರಿಂದ ತಾಳೆ ಎಣ್ಣೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದ್ದು, ಅತಿಹೆಚ್ಚು ಬೇಡಿಕೆಯಿರುವ ಈ ಬೆಳೆಯನ್ನು ರೈತರು ಬೆಳೆದರೆ ಆರ್ಥಿಕವಾಗಿ ಸದೃಢವಾಗಬಹುದು ಎಂದು ತಿಳಿಸಿದರು.

ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಎಚ್.ನಾಗರಾಜು ಮಾತನಾಡಿ, ತಾಲೂಕಿನಲ್ಲಿ ಸುಮಾರು 12 ಲಕ್ಷ ಹೆಕ್ಟೇರ್ ತಾಳೆ ಬೆಳೆ ಪ್ರದೇಶವಿದ್ದು, ಬೆಳೆ ಪ್ರದೇಶ ವಿಸ್ತರಣೆಗೆ ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ಹೆಕ್ಟೇರ್‌ಗೆ 150 ಗಿಡಗಳ ವಿತರಣೆ, ಕೋಯ್ಲು ಯಂತ್ರ, ಅಂತರ ಬೇಸಾಯ ಮತ್ತು ನಿರ್ವಹಣೆಗೆ ಸಹಾಯಧನ ನೀಡುತ್ತಿದ್ದು, ರೈತರು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು.
ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್, ಫಲಾನುಭವಿ ಥಾಮಸ್ ಚೆರಿಯನ್, ಮುಖಂಡ ಗಣೇಶ್ ಕುಮಾರಸ್ವಾಮಿ, ಇಲಾಖೆ ಸಿಬ್ಬಂದಿ ಹಾಜರಿದ್ದರು.