ಮಂಗಳೂರು : ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಗ್ರೂಪ್ ಡಿ ನೌಕರರಾಗಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 188 ಮಂದಿ ನೌಕರರಿಗೆ ತಕ್ಷಣ ವೇತನ ಪಾವತಿಸಲು ಸೂಕ್ತ ಕ್ರಮಗೊಳ್ಳುವಂತೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸ್ಪೀಕರ್ ಯು.ಟಿ..ಖಾದರ್ ಅವರು ಗುರುವಾರ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಹೊರ ಗುತ್ತಿಗೆ ಆಧಾರದಲ್ಲಿ
ಕಾರ್ಯನಿರ್ವಹಿಸುತ್ತಿರುವ ನೌಕರರು ಮನವಿ ಸಲ್ಲಿಸಿ ಕಳೆದ 2 ತಿಂಗಳಿಂದ ವೇತನ ಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಬೆಂಗಳೂರಿನ ಡಿಟೆಕ್ಟ್‌ವೆಲ್ ಸೆಕ್ಯುರಿಟಿ ಸರ್ವಿಸ್ ಎನ್ನುವ ಸಂಸ್ಥೆಯಡಿ 188 ಮಂದಿ ನೌಕರರು ವೆನ್ಲಾಕ್‌ನಲ್ಲಿ ಶುಚಿತ್ವ, ರೋಗಿಗಳಿಗೆ ಅಗತ್ಯ ಇರುವ ಸೇವೆ ಸಹಿತ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ. ಆದರೆ ಕಳೆದ 2 ತಿಂಗಳಿಂದ ನಮಗೆ ವೇತನ ನೀಡಿಲ್ಲ. ಸೆಕ್ಯುರಿಟಿ ಸರ್ವಿಸ್ ಸಂಸ್ಥೆಯನ್ನು ಸಂಪರ್ಕಿಸಿದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ವೆನ್ಲಾಕ್ ಅಸ್ಪತ್ರೆಯ ಮೇಲಾಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಇಲ್ಲ. ಕೆಲಸ ಮಾಡಿ, ಇಲ್ಲವಾದರೆ ಬಿಟ್ಟು ಹೋಗಿ ಎಂದು ಕೆಲವು ಅಧಿಕಾರಿಗಳು ದರ್ಪದಿಂದ ಉತ್ತರಿಸುತ್ತಾರೆ .ವೇತನ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಹೊರ ಗುತ್ತಿಗೆ ನೌಕರರು ತಮ್ಮ ಪರಿಸ್ಥಿತಿ ವಿವರಿಸಿದರು.
ಮನವಿ ನೀಡಿದ ನೌಕರರ ಸಮ್ಮುಖದಲ್ಲೇ ಸ್ಪೀಕರ್ ಯು.ಟಿ..ಖಾದರ್ ಅವರು ವೆನ್ಲಾಕ್ ಅಧೀಕ್ಷಕಿ ಡಾ.ಜೆಸಿಂತಾ ಡಿಸೋಜಾ ಅವರನ್ನು ಈ ಬಗ್ಗೆ ವಿಚಾರಿಸಿದರು. ಅವರಿಂದ ಸೂಕ್ತ ಉತ್ತರ ಸಿಗಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಖಾದರ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕೆಲಸ ಮಾಡಿದ ನೌಕರರಿಗೆ ವೇತನ ನೀಡುವುದು ನಿಮ್ಮ ಜವಾಬ್ದಾರಿ. ಗುತ್ತಿಗೆ ವಹಿಸಿದ ಸಂಸ್ಥೆ ಪರ ವಹಿಸಬೇಡಿ. ನೌಕರರಿಗೆ ವೇತನ ನೀಡದೆ ಅನ್ಯಾಯ ಮಾಡಿರುವ ಸಂಸ್ಥೆಯ ವಿರುದ್ದ ಕೇಸು ದಾಖಲಿಸುವ ಮೂಲಕ ಕಪ್ಪು ಪಟ್ಟಿಗೆ ಸೇರಿಸಿ ಎಂದು ಸ್ಪೀಕರ್ ಸೂಚನೆ ನೀಡಿದರು. ಆಸ್ಪತೆಯ ನಿಧಿಯಿಂದ ನೌಕರರಿಗೆ ವೇತನ ನೀಡಿ. ಇನ್ನು ಗುತ್ತಿಗೆ ವಹಿಸಿದ ಸಂಸ್ಥೆಯ ಖಾತೆಗೆ ಹಣ ವರ್ಗಾಯಿಸಬೇಡಿ. ಈ ಬಗ್ಗೆ ಜಿಲ್ಲಾಧಿಕಾರಿ ಅವರಲ್ಲಿ ಮಾತಾಡುತ್ತೇನೆ ಎಂದು ತಿಳಿಸಿದ ಸ್ಪೀಕರ್ ಒಂದೆರಡು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೊರ ಗುತ್ತಿಗೆ ನೌಕರರಿಗೆ ಭರವಸೆ ನೀಡಿದರು.