ಕೊಪ್ಪಳ: ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೆಸರನ್ನು ರಾಜ್ಯದಲ್ಲಿನ ಸರ್ಕಲ್ವೊಂದಕ್ಕೆ ಇಡಲು ಮುಂದಾದಾಗ ಒಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ವೃತ್ತಕ್ಕೆ ಬಿಪಿನ್ ರಾವತ್ ಹೆಸರಿಟ್ಟು ನಾಮಫಲಕ ಅನಾವರಣಗೊಳಿಸುತ್ತಿದ್ದಂತೆ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸತ್ತ ಚಾಲಕ; ದೇಹ ನೂರು ಮೀಟರ್ ದೂರ ಎಳೆದೊಯ್ದ ಮೇಲೆ ನಿಂತಿತು ವಾಹನ
ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ನೇತೃತ್ವದಲ್ಲಿ ಒಂದಷ್ಟು ಜನರು ಪ್ರತಿಭಟನೆ ನಡೆಸಿದ್ದು, ರಾವತ್ ಹೆಸರಿನ ಬೋರ್ಡ್ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಸರ್ಕಲ್ಗೆ ಈಗಾಗಲೇ ಇಸ್ಲಾಂಪುರ ಎಂದು ಹೆಸರಿಡಲಾಗಿದೆ. ಆ ನಾಮಫಲಕ ತೆಗೆದು ರಾವತ್ ಹೆಸರಿನ ನಾಮಫಲಕ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಪೊಲೀಸರು ಮತ್ತು ಅಧಿಕಾರಿಗಳ ಜೊತೆಗೂ ಪ್ರತಿಭಟನಾಕಾರರು ವಾಗ್ವಾದ ನಡೆಸಿದ್ದಾರೆ. ಬಿಗುವಿನ ವಾತಾವರಣ ಇರುವ ಕಾರಣ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪ್ರತಿಭಟನಾಕಾರರಿಗೆ ಸೈನಿಕರ ಬಗ್ಗೆ ಗೌರವ ಇಲ್ಲ ಎಂದು ಬಿಜೆಪಿ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.