ಜಿಲ್ಲೆ

ಪ್ರಸ್ತಾವನೆ ಹಂತದಲ್ಲೇ ಗುಂಪು ಮನೆ

ಅವಿನಾಶ್ ಜೈನಹಳ್ಳಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುಂಪು ಮನೆ ನಿರ್ಮಿಸುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕನಸಿನ ಯೋಜನೆ ಅನೇಕ ವರ್ಷಗಳಿಂದ ಪ್ರಸ್ತಾವನೆ ಹಂತದಲ್ಲಿಯೇ ಇದ್ದು, ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜನರಿಗೆ ನಿವೇಶನ ನೀಡುವುದು ಮುಡಾ ಜವಾಬ್ದಾರಿಯಾಗಿದ್ದರೂ ಮೈಸೂರು ಹಾಗೂ ಸುತ್ತಲ ಪ್ರದೇಶದಲ್ಲಿ ದುಬಾರಿ ದರದಲ್ಲಿ ಭೂಮಿ ಖರೀದಿಸಬೇಕಿರುವುದರಿಂದ ಅದು ಕಷ್ಟಸಾಧ್ಯವಾಗಿದೆ. ಹೀಗಾಗಿ ನಗರದಲ್ಲಿರುವ ಮುಡಾ ಜಾಗದಲ್ಲಿಯೇ ಗುಂಪು ಮನೆಗಳನ್ನು ನಿರ್ಮಿಸಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸೂರು ದೊರಕಿಸಿಕೊಡಬೇಕೆಂಬ ಪ್ರಯತ್ನ 2013ರಲ್ಲಿಯೇ ಆರಂಭವಾಯಿತು.

ಬಳಿಕ ಎಚ್.ವಿ.ರಾಜೀವ್ ಅವರು ಮುಡಾ ಅಧ್ಯಕ್ಷರಾಗಿದ್ದಾಗ ಈ ಪ್ರಯತ್ನಕ್ಕೆ ಅಂತಿಮ ರೂಪ ದೊರೆಯಿತು. ಗುಂಪು ಮನೆ ನಿರ್ಮಿಸುವ ಕುರಿತು ನಗರದಲ್ಲಿ ಬೇಡಿಕೆ ಸಮೀಕ್ಷೆ ನಡೆಸಿದಾಗ 35 ಸಾವಿರಕ್ಕೂ ಹೆಚ್ಚು ಮಂದಿ ಆಸಕ್ತಿ ತೋರಿದರು. ಹೀಗಾಗಿ ಮುಡಾಗೆ ಸೇರಿದ ವಿಜಯನಗರ 2ನೇ ಹಂತದ ರಿಂಗ್ ರಸ್ತೆ ಬಳಿ 4 ಎಕರೆ ಜಾಗದಲ್ಲಿ 2 ಬ್ಲಾಕ್‌ಗಳಲ್ಲಿ ಒಟ್ಟು 448 ಮನೆ, ದಟ್ಟಗಳ್ಳಿಯ 3.08 ಎಕರೆ ಜಾಗದಲ್ಲಿ 2 ಬ್ಲಾಕ್‌ಗಳಲ್ಲಿ 392 ಸೇರಿದಂತೆ ಒಟ್ಟು 840 ಮನೆಗಳನ್ನು ನಿರ್ಮಿಸಲು ಮುಡಾ ವತಿಯಿಂದ ಡಿಪಿಆರ್ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಆದರೆ, ಇನ್ನೂ ಒಪ್ಪಿಗೆ ದೊರೆಯದೆ ಯೋಜನೆ ಅನುಷ್ಠಾನಗೊಳಿಸುವುದು ತಡವಾಗುತ್ತಿದೆ.