ಜಿಲ್ಲೆ

ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿ: ಜಯರಾಮ ನೆಲ್ಲಿತ್ತಾಯ

Mysuru

ಮೈಸೂರು: ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿಗೊಂಡು ಕುಡಿಯುವ ನೀರಿನ ಸಮಸ್ಯೆ ನೀಗುವುದಲ್ಲದೆ, ಪ್ರಾಣಿ-ಪಕ್ಷಿಗಳು ಹಾಗೂ ಬೆಳೆಗಳಿಗೆ ಸಹಕಾರಿಯಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಹೇಳಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 511ನೇ ‘ನಮ್ಮೂರು-ನಮ್ಮ ಕೆರೆ’ ಕಾರ್ಯಕ್ರಮದಡಿ ಶುಕ್ರವಾರ ತಾಲೂಕಿನ ಗೋಪಾಲಪುರ ಕೆರೆಯ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆರೆಯ ಪುನಶ್ಚೇತನದಿಂದ ಅಂತರ್ಜಲ ವೃದ್ಧಿಗೊಂಡು ಬೇಸಿಗೆಯಲ್ಲೂ ಸುತ್ತಲಿನ ಬಾವಿಗಳಲ್ಲಿ ನೀರು ಬರುತ್ತದೆ. ದನಕರುಗಳು, ವನ್ಯಪ್ರಾಣಿ, ಪಕ್ಷಿಗಳು ಈ ಕೆರೆಯಲ್ಲಿ ದಾಹ ಇಂಗಿಸಿಕೊಳ್ಳಬಹುದಾಗಿದೆ. ಅಲ್ಲದೆ, ಅಚ್ಚುಕಟ್ಟಿನ ಕೃಷಿ ಜಮೀನುಗಳಲ್ಲಿ ಉತ್ತಮ ಫಸಲು ಬಂದು ರೈತರಿಗೆ ಅನುಕೂಲವಾಗಲಿದೆ ಎಂದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ಕೆರೆಗಳ ಪುನಶ್ಚೇತನಕ್ಕೆ ಚಿಂತಿಸಿ ಕಾರ್ಯಕ್ರಮ ರೂಪಿಸಲಾಗಿದೆ. 510 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದ್ದು, 511ನೇ ಕೆರೆ ಇದಾಗಿದೆ. ಮೈಸೂರು ಪ್ರಾದೇಶಿಕ ವಿಭಾಗದ ವ್ಯಾಪ್ತಿಯಲ್ಲಿ ಪುನಶ್ಚೇತನಗೊಳ್ಳುತ್ತಿರುವ 51ನೇ ಕೆರೆ ಇದಾಗಿದೆ ಎಂದು ಹೇಳಿದರು.
ಕೆರೆಗಳು ಗ್ರಾಮೀಣ ಜನಜೀವನದ ಅವಿಭಾಜ್ಯ ಅಂಗವಾಗಿವೆ. ಜನರ ಜೀವನ ಕ್ರಮವನ್ನು ಸುಂದರಗೊಳಿಸಬೇಕಾದರೆ ಕೆರೆಗಳ ಅಸ್ತಿತ್ವವೂ ಬಹಳ ಮುಖ್ಯ. ಆದರೆ, ಕೆಲವರ ಸ್ವಾರ್ಥದಿಂದ ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಕೆರೆ ಅಂಗಳದಲ್ಲಿಯೇ ಲೇಔಟ್ ನಿರ್ಮಾಣವಾಗುತ್ತಿವೆ. ಜತೆಗೆ ಘನತ್ಯಾಜ್ಯವನ್ನು ಕೆರೆಗಳ ಬಳಿಯೇ ವಿಲೇವಾರಿ ಮಾಡಲಾಗುತ್ತಿದೆ. ಕೆರೆಗಳನ್ನು ಕೆರೆಗಳನ್ನಾಗಿಯೇ ಉಳಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ ಎಂದರು.


ಕೆರೆಗಳ ಸಂರಕ್ಷಣೆ ಕೂಡ ನಮ್ಮ ಪೂರ್ವಜರು ಕಲಿಸಿಕೊಟ್ಟ ಒಂದು ಸಂಸ್ಕೃತಿಯಾಗಿದ್ದು, ಅದನ್ನು ಉಳಿಸಿಕೊಳ್ಳಬೇಕಾಗಿದೆ. ಕೆರೆ ಸಮೃದ್ಧವಾಗಿದ್ದರೆ ಇಡೀ ಊರು ಸಮೃದ್ಧವಾಗಿರುತ್ತದೆ. ಕೃಷಿ ಚಟುವಟಿಕೆಗಳು, ಆಹಾರ ಪದ್ಧತಿ ಚೆನ್ನಾಗಿರುತ್ತದೆ. ಅಂತರ್ಜಲವೂ ಹೆಚ್ಚಾಗುತ್ತದೆ. ಈ ಎಲ್ಲ ದೃಷ್ಟಿಕೋನದಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಕೆರೆಯೂ ಒಂದು ಭಾಗವೆಂದು ಭಾವಿಸಿ ಕೆರೆಗಳ ಪುನಶ್ಚೇತನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದೆ ಎಂದು ತಿಳಿಸಿದರು.


ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸಹಕಾರದಲ್ಲಿ 19 ಎಕರೆ ವಿಸ್ತೀರ್ಣದ ಕೆರೆಯನ್ನು ಪುನಶ್ಚೇತನ ಮಾಡಲಾಗುತ್ತಿದೆ. ಆದ್ದರಿಂದ ಗ್ರಾಮಸ್ಥರು ಮತ್ತು ಸ್ಥಳೀಯ ಆಡಳಿತ ನಮ್ಮ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೆರೆಯ ಸಂರಕ್ಷಣೆಗಾಗಿ ಸ್ಥಳೀಯ ಮಟ್ಟದಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿದ್ದು, ಅದರ ಮೇಲುಸ್ತುವಾರಿಯಲ್ಲಿ ಕೆರೆಯ ಅಭಿವೃದ್ಧಿ ಸಾಗುತ್ತದೆ. ಇದರೊಂದಿಗೆ ಗ್ರಾಮವಿಕಾಸ ಚಟುವಟಿಕೆಗಳಿಗೂ ಆದ್ಯತೆ ನೀಡಿ ಕೆಲಸ ನಿರ್ವಹಿಸಲಾಗುತ್ತದೆ ಎಂದರು.