ಜಿಲ್ಲೆ

ಪಾರ್ವಾಟ ಗುಡ್ಡದಲ್ಲಿ ಕಡಲೆಕಾಯಿ ಪರಿಷೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೇವನಹಳ್ಳಿ: ಪಟ್ಟಣದ ಪಾರಿವಾಟ ಗುಡ್ಡದ ಶ್ರೀಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಜೈಮಾರುತಿ ಭಕ್ತ ಮಂಡಳಿಯಿಂದ 69ನೇ ಕಡಲೆಕಾಯಿ ಪರಿಷೆ ಅದ್ದೂರಿಯಾಗಿ ನಡೆಯಿತು.

ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ, ಸಹಸ್ರನಾಮಾರ್ಚನೆ ಹಾಗೂ ಗವಿ ವೀರಭದ್ರ ಸ್ವಾಮಿ ಮತ್ತು ಬೀರಲಿಂಗೇಶ್ವರ ಸ್ವಾಮಿ, ಭಕ್ತ ಕನಕದಾಸ ಸ್ವಾಮಿಯವರಿಗೆ ವಿಶೇಷ ಅಲಂಕಾರ ಹಾಗೂ ಕಾರ್ತಿಕ ದೀಪ ದರ್ಶನ ಮಾಡಲಾಗಿತ್ತು.

ಗುಟ್ಟದ ಮೇಲಿನ ದೇವಾಲಯಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬೆಳಗ್ಗೆ ಯುವ ಸಮೂಹಕ್ಕೆ ಗುಡ್ಡಗಾಡು ತೋಟದ ಸ್ಪರ್ಧೆ, ಬೆಳಗ್ಗೆ 11ಗಂಟೆಗೆ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ 400 ಮೀಟರ್ ಪುರುಷರಿಗೆ ಓಟದ ಸ್ಪರ್ಧೆ ನಡೆಯಿತು, ಹಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿ, ಪ್ರೌಢಶಾಲಾ ಬಾಲಕರಿಗೆ ಮಧ್ಯಾಹ್ನ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಗಳನ್ನು ನಡೆಸಲಾಯಿತು.

ದೇವನಹಳ್ಳಿ ಪುರಸಭೆ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ, ಪರಿಷೆಗೆ ಆಗಮಿಸುವವರಿಗೆ ಕಡಲೆಕಾಯಿ ವಿತರಣೆ ಮಾಡಲಾಯಿತು.

ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಾಂತಕುಮಾರ್.ವಿ, ಕೃಷಿಕ ಸಮಾಜದ ರವಿಕುಮಾರ್, ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ನಾಗೇಗೌಡ , ಪುರಸಭಾ ಸದಸ್ಯರಾದ ಎನ್. ರಘು, ಬಿ.ಎಲ್. ಶ್ರೀಧರಮೂರ್ತಿ, ಮಾರುತಿ ಭಕ್ತ ಮಮಡಳಿಯ ಮೋಟಪ್ಪ, ಮುನಿರಾಜು, ಶಿವನಾಪುರ ರಮೇಶ್, ಬಿ. ಪುಟ್ಟಸ್ವಾಮಿ, ಪುರಸಭಾ ಆರೋಗ್ಯ ನಿರೀಕ್ಷಕಿ ಶ್ರೀದೇವಿ ಇದ್ದರು.

ಪ್ಲಾಸ್ಟಿಕ್ ನಿಷೇಧ

ಪರಿಷೆಗೆ ಬರುವವರು ಮನೆಯಿಂದಲೇ ಕೈ ಚೀಲ ತಂದು ಕಡಲೆಕಾಯಿ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ಅರಿವು ಮೂಡಿಸಿದ ಪರಿಣಾಮ ಈ ಬಾರಿ ಪರಿಷೆಯಲ್ಲಿ ಪ್ಲಾಸ್ಟಿಕ್ ನಿಷೇಧ ನಿಯಮ ಕಡ್ಡಾಯವಾಗಿ ಪಾಲಿಸಲಾಯಿತು, ಬಟ್ಟೆ ಬ್ಯಾಗ್‌ಗಳನ್ನು ಬಳಸುವಂತೆ ವ್ಯಾಪಾರಿಗಳಿಗೆ ಸೂಚಿಸಲಾಯಿತು. ಬಟ್ಟೆ ಬ್ಯಾಗ್ ಇಲ್ಲವಾದಲ್ಲಿ ಕಾಗದದ ಕವರ್‌ಗಳಲ್ಲಿ ಹಾಕಿ ಕೊಡಬೇಕೆಂಬ ಪುರಸಭೆ ಸೂಚನೆ ಕೂಡ ಪಾಲನೆಯಾದಂತೆ ಕಂಡುಬಂತು.