ಜಿಲ್ಲೆ

ಬೀದಿಗಿಳಿದ ಅಡಕೆ ಬೆಳೆಗಾರರು

ಶಿರಸಿ: ಅಡಕೆ ಬೆಳೆಗಾರರ ಕೂಗು ಈಗ ಮುಗಿಲು ಮುಟ್ಟಿದೆ. ಕಳೆದ ಎರಡು ತಿಂಗಳಿನಿಂದ ತಾಲೂಕಿನಾದ್ಯಂತ ಅಡಕೆ ಬೆಳೆ ಕೊಳೆ ರೋಗದಿಂದಾಗಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ನಗರದ ಟಿಎಸ್‌ಎಸ್, ಟಿಎಂಎಸ್, ಟಿಆರ್‌ಸಿ, ಅಡಕೆ ವರ್ತಕರು, ರೈತರು ಬೃಹತ್ ಸಂಖ್ಯೆಯಲ್ಲಿ ಶುಕ್ರವಾರ ಆಗಮಿಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಪರಿಹಾರಕ್ಕೆ ಆಗ್ರಹಿಸಿದರು.

ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಜಾನುವಾರು ನಷ್ಟ, ಬೆಳೆ ನಷ್ಟದಿಂದ ರೈತರು ಕಂಗೆಟ್ಟಿದ್ದಾರೆ. ಜಿಲ್ಲೆಯ ರೈತರ ಜೀವನಾಡಿಯಾದ ಅಡಕೆ ಹಾಗೂ ಕಾಳುಮೆಣಸು ಬೆಳೆಗೆ ಕೊಳೆ ರೋಗ ತಗುಲಿ ತೀವ್ರ ಹಾನಿ ಸಂಭವಿಸಿದೆ. ಬೆಳೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಔಷಧ ಸಿಂಪಡಿಸಿದರೂ ತೀವ್ರ ಮಳೆಯ ಕಾರಣದಿಂದ ಪರಿಣಾಮ ಬೀರಿಲ್ಲ. ಅಬ್ಬರದ ಗಾಳಿಯ ಕಾರಣದಿಂದ ಕೊಳೆ ರೋಗವು ಮತ್ತಷ್ಟು ವೇಗವಾಗಿ ವ್ಯಾಪಿಸಿ ಹಿಂದೆಂದೂ ಕಂಡುಕೇಳರಿಯದ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಶೇ. 40 ರಿಂದ ಶೇ.70ರಷ್ಟು ಅಡಕೆ ಬೆಳೆ ನಷ್ಟವಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ಝಳದಿಂದ ಅಡಕೆ ಮರಗಳಿಗೆ ಹಾನಿಯಾಗಿದ್ದು, ಎಲೆಚುಕ್ಕಿ ರೋಗದಿಂದ ಅಡಕೆಯ ಮರಗಳು ದೊಡ್ಡ ಪ್ರಮಾಣದಲ್ಲಿ ಈಗಾಗಲೇ ಹಾಳಾಗಿವೆ. ಅಡಕೆ ಬೆಳೆಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರಿಗೆ ಕೊಳೆ ರೋಗವು ಜೀವನದ ಮೇಲೆ ಮತ್ತೊಂದು ಬರೆ ಎಳೆದಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗರಿಷ್ಠ ಪ್ರಮಾಣದಲ್ಲಿ ಬೆಳೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯಾರಾಣಿ ಮನವಿ ಸ್ವೀಕರಿಸಿ ಮಾತನಾಡಿ, ಘಟ್ಟದ ಮೇಲಿನ ತಾಲೂಕುಗಳಲ್ಲಿ ಅಡಕೆ ಬೆಳೆಗೆ ಕೊಳೆ ರೋಗ ತಗುಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿರುವುದನ್ನು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ರೈತರ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಟಿಎಸ್‌ಎಸ್ ಉಪಾಧ್ಯಕ್ಷ ಎಂ.ಎನ್. ಭಟ್ಟ ತೋಟಿಮನೆ, ಟಿಆರ್‌ಸಿ ನಿರ್ದೇಶಕ ಲೋಕೇಶ ಹೆಗಡೆ ಹುಲೇಮಳಗಿ, ಪ್ರಮುಖರಾದ ಶಿವಾನಂದ ಕಳವೆ, ರವಿ ಹೆಗಡೆ ಹಳದೋಟ, ಜಲಜಾಲಕ್ಷಿ ಹೆಗಡೆ, ಆರ್.ವಿ. ಹೆಗಡೆ ಚಿಪಗಿ, ಜಿ.ವಿ. ಜೋಶಿ ಕಾಗೇರಿ, ಆರ್.ಡಿ. ಹೆಗಡೆ ಜಾನ್ಮನೆ, ಮಹೇಂದ್ರ ಹೆಗಡೆ, ಜಿ.ಆರ್. ಭಟ್ಟ ಹೆಬ್ಬಲಸು ಸೇರಿದಂತೆ ಸೇವಾ ಸಹಕಾರಿ ಸಂಘಗಳ ಪ್ರತಿನಿಧಿಗಳು, ಅಡಕೆ ಬೆಳೆಗಾರರು ಇದ್ದರು.

ಹೋಬಳಿವಾರು ಸಮೀಕ್ಷೆಗೆ ಸೂಚಿಸಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಹೋಬಳಿವಾರು ಅಡಕೆ ಬೆಳೆ ಸಮೀಕ್ಷೆ ನಡೆಸಲು ಆದೇಶಿಸಬೇಕು. ಹವಾಮಾನ ಆಧರಿತ ಬೆಳೆ ವಿಮೆಯು ಅಡಕೆ ಕೊಳೆ ರೋಗಕ್ಕೆ ಅನ್ವಯ ಆಗುವುದಿಲ್ಲ. ಕೊಳೆ ರೋಗದಿಂದ ಹಾನಿಗೊಳಗಾದ ಅಡಕೆ, ಕಾಳುಮೆಣಸು ಬೆಳೆಯ ಸ್ಥಿತಿಗತಿಯ ಬಗ್ಗೆ ವಸ್ತುನಿಷ್ಠ ವರದಿ ಪಡೆದು ಈ ಪ್ರದೇಶವನ್ನು ಕೊಳೆ ರೋಗ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಅಡಕೆ, ಕಾಳುಮೆಣಸು ಬೆಳೆಗೆ ಕೊಳೆಯ ಪರಿಹಾರ ರೂಪವಾಗಿ ಪರಿಹಾರ ಧನ ಹಾಗೂ ಔಷಧ ಸಿಂಪಡಣೆಗೆ ಅಗತ್ಯವಿರುವ ಮೈಲುತುತ್ತಕ್ಕೆ ಸಹಾಯಧನ ನೀಡಬೇಕೆಂದು ರೈತರ ಪರವಾಗಿ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ಟಿಎಂಎಸ್ ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಸರ್ಕಾರಕ್ಕೆ ಆಗ್ರಹಿಸಿದರು.

ಮನವಿ

ಶಿರಸಿಯ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ್ದ ರೈತರು.ವಿಪರೀತ ಗಾಳಿ-ಮಳೆಯಿಂದಾಗಿ ಸಿದ್ದಾಪುರ ತಾಲೂಕಿನಲ್ಲಿ ಮಾರಕ ಕೊಳೆರೋಗಕ್ಕೆ ಅಡಕೆ ತುತ್ತಾಗಿದ್ದು, ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ಆಗ್ರಹಿಸಿ ಶಾಸಕ ಭೀಮಣ್ಣ ನಾಯ್ಕ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಲೂಕಿನ ಸೋವಿನಕೊಪ್ಪ ಗ್ರಾಪಂನವರು ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಸುಮಾ ಮಹೇಶ ಗೌಡ, ಉಪಾಧ್ಯಕ್ಷ ಗಿರೀಶ ಶೇಟ್, ಸದಸ್ಯರಾದ ಮೋಹನ ಗೌಡ, ರವಿ ನಾಯ್ಕ, ಗಣಪತಿ ಗೌಡ, ರಾಧಾ ಗೌಡ, ಸುರೇಖಾ ನಾಯ್ಕ , ಭವಾನಿ ಹಸ್ಲರ್, ಚಂದ್ರಕಲಾ ಹಸ್ಲರ್ ಇತರರಿದ್ದರು.