ಜಿಲ್ಲೆ

ನೆಲಕಚ್ಚಿದ ಕೆಂಪುರಾಣಿ ದರ

ಕೋಲಾರ ಡೆಸ್ಕ್

ಕೋಲಾರ; ಜಿಲ್ಲೆಯ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಟೊಮ್ಯಾಟೊಗೆ ಕಳೆದ 3 ತಿಂಗಳಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಮೇ ಪ್ರಾರಂಭದ ನಂತರವಾದರೂ ಉತ್ತಮ ಬೆಲೆ ಬರುತ್ತದೆಂಬ ನಿರೀಕ್ಷೆಯಲ್ಲಿದ್ದವರಿಗೆ ಈಗ 15 ಕೆಜಿ ಬಾಕ್ಸ್​ 100 ರೂ. ಗಡಿ ದಾಟದ ಕಾರಣ ನಂಬಿಕೆ ಹುಸಿಯಾಗಿದೆ.

ಕಳೆದ ಮೂರು ತಿಂಗಳಿಂದ 15 ಕೆಜಿ ಟೊಮ್ಯಾಟೊ ಬಾಕ್ಸ್​ 200 ಗಡಿ ದಾಟಿಲ್ಲ. ಯುಗಾದಿ ಮತ್ತು ರಂಜಾನ್​ ಸಂದರ್ಭದಲ್ಲಿ 300 ರಿಂದ 400 ರೂ.ವರೆಗೆ 15 ಕೆಜಿ ಬಾಕ್ಸ್​ ಮಾರಾಟವಾಗಿದೆ.

ಪ್ರತಿವರ್ಷ ಮೇ, ಜೂನ್​, ಜುಲೈ, ಆಗಸ್ಟ್​ನಲ್ಲಿ ಉತ್ತಮ ಬೆಲೆ ಇರುತ್ತದೆಂದು ರೈತರು ಹೆಚ್ಚಾಗಿ ಟೊಮ್ಯಾಟೊ ಬೆಳೆಯುತ್ತಾರೆ. ಈ ವರ್ಷ ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಮೊದಲು ನಾಟಿ ಮಾಡಿರುವವರಿಗೆ ಈಗ ಫಸಲು ಪ್ರಾರಂಭಗೊಂಡಿದ್ದು, ಪ್ರಾರಂಭದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೇ ಇರುವುದರಿಂದ ಕಂಗಾಲಾಗಿದ್ದಾರೆ. ಕೋಲಾರವಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದ ನಾಸಿರ್​ನಲ್ಲೂ ಟೊಮ್ಯಾಟೊ ಹೆಚ್ಚಾಗಿ ಬೆಳೆಯುತ್ತಾರೆ. ಕೋಲಾರ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನಕ್ಕೆ ಫಸಲು ಇಳಿಮುಖವಾಗುತ್ತಿತ್ತು. ಆದರೆ ಈ ವರ್ಷ ಹೊರ ರಜ್ಯಗಳಲ್ಲಿಯೂ ಉತ್ತಮ ವಾತಾವರಣ ಇರುವುದರಿಂದ ಆಯಾ ರಾಜ್ಯಗಳಲ್ಲಿ ಉತ್ತಮ ಫಸಲು ಸಿಗುತ್ತಿರುವುದರಿಂದ ಕೋಲಾರ ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಬೇಡಿಕೆ ಇಲ್ಲದಂತಾಗಿದೆ.

ಪ್ರತಿವರ್ಷ ಟೊಮ್ಯಾಟೊಗೆ ವೈರಸ್​ ಮತ್ತು ಕೀಟಬಾಧೆ ಕಾಡುತ್ತಿತ್ತು. ಈ ವರ್ಷ ಕೋಲಾರದ ಬೆಳೆಗೆ ಉತ್ತಮ ವಾತಾವರಣ ಹಾಗೂ ವೈರಸ್​ ಕಾಟ ಇಲ್ಲದೆ ಇರುವುದರಿಂದ ಫಸಲಿನ ನಿರೀಕ್ಷೆ ಇದೆ. ಈಗಾಗಲೇ ಉತ್ತಮ ಫಸಲು ಬಂದಿದ್ದು, ಉತ್ತಮ ಬೆಲೆ ಇದ್ದರೆ ಬೆಳೆಗಾರರು ಕಂಗಾಲಾಗಿದ್ದಾರೆ.

ಕೋಲಾರ ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಬೇಡಿಕೆ ಇಲ್ಲ. ಹೊರ ರಾಜ್ಯ ಮತ್ತು ಹೊರ ದೇಶಕ್ಕೆ ರಫ್ತಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಮಳೆ ಇಲ್ಲದ ಕಾರಣ ನಾಸಿಕ್​ನಲ್ಲಿ ಹೆಚ್ಚು ಟೊಮ್ಯಾಟೊ ಬೆಳೆಯುತ್ತಿದ್ದಾರೆ. ಹೊರ ದೇಶವಾದ ಬಾಂಗ್ಲಾ ದೇಶಕ್ಕೆ ನಾಸಿಕ್​ನಿಂದ ಬೆಳೆ ರಫ್ತಾಗುತ್ತಿದೆ. ಕೋಲಾರದ ಗಡಿ ಭಾಗವಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಉತ್ತಮ ಫಸಲು ಇರುವ ಕಾರಣ ಕೋಲಾರದ ಟೊಮ್ಯಾಟೊಗೆ ಬೇಡಿಕೆ ಕಡಿಮೆ ಇರುವ ಕಾರಣ ಬೆಲೆ ಕುಸಿಯಲು ಕಾರಣವಾಗಿದೆ.

> -ಚಂದ್ರಾರೆಡ್ಡಿ

ಟೊಮ್ಯಾಟೊ ಮಂಡಿ ಮಾಲೀಕ

ಕಳೆದ 3 ತಿಂಗಳಿಂದ ಟೊಮ್ಯಾಟೊಗೆ ಬೆಲೆ ಇಲ್ಲ. 15 ಕೆಜಿ ಬಾಕ್ಸ್​ 400 ರಿಂದ 500 ರೂ. ಮಾರಾಟವಾದರೆ ಮಾತ್ರ ರೈತನಿಗೆ ಲಾಭ. ಮೇ ನಿಂದ ಆಗಸ್ಟ್​ ತನಕ ಟೊಮ್ಯಾಟೊ ಉತ್ತಮ ಬೆಲೆ ಬರುತ್ತದೆಂಬ ಆಸೆಯಿಂದ ರೈತ ಲಕ್ಷಾಂತರ ರೂ. ಬಂಡವಾಳ ಹಾಕಿ ಟೊಮ್ಯಾಟೊ ಬೆಳೆದಿದ್ದಾರೆ. ಆದರೆ ಈಗ ಪ್ರಸ್ತುತ 100 ರೂ. ಗಡಿ ದಾಟುತ್ತಿಲ್ಲ. ಮುಂದೆ ಬೆಲೆ ಬರುತ್ತದೆಂಬ ನಂಬಿಕೆ ಇಲ್ಲದಂತಾಗಿದೆ. ಸರ್ಕಾರ ಈಗಿನಿಂದಲೇ ಬೆಳೆಗಾರರಿಗೆ ಬೆಂಬಲ ನೀಡಬೇಕು.

> -ಶ್ರೀರಾಮರೆಡ್ಡಿ

ಟೊಮೆಟೋ ಬೆಳೆಗಾರ