ಜಿಲ್ಲೆ

ತಲಕಾಡಿನಲ್ಲಿ ಕನ್ನಡ ಭವನಕ್ಕೆ ಭೂಮಿಪೂಜೆ

ಅಭಿನಯ್ ಎಚ್.ಎಂ

ತಿ.ನರಸೀಪುರ: ಇತಿಹಾಸ ಪ್ರಸಿದ್ಧ ತಲಕಾಡು ಗ್ರಾಮದ ಹೃದಯ ಭಾಗದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಕನ್ನಡ ಭವನ ನಿರ್ಮಾಣವಾಗುತ್ತಿರುವುದು ಸೂಕ್ತ ಮತ್ತು ಸಮಯೋಚಿತ ಎಂದು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿಂಗಾಪುರ್ ಶ್ರೀನಿವಾಸ್ ಹೇಳಿದರು.

ತಾಲೂಕಿನ ತಲಕಾಡಿನ ಹಳೇಬೀದಿಯಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್‌ನ 10 ಲಕ್ಷ ರೂ. ಅನುದಾನ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಭವನ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ವೈದ್ಯನಾಥೇಶ್ವರ, ಶ್ರೀ ಕೀರ್ತಿನಾರಾಯಣಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ದೇವಾಲಯದ ಸಮೀಪದಲ್ಲಿರುವ ನಿವೇಶನದಲ್ಲಿ ನಿರ್ಮಾಣವಾಗುವ ಕನ್ನಡ ಭವನ ವಿವಿಧ ಉದ್ದೇಶಗಳಿಗೆ, ಸಭೆ ಸಮಾರಂಭಗಳಿಗೆ, ತರಬೇತಿಗಳಿಗೆ, ಹೋಬಳಿಯ ಸಾರ್ವಜನಿಕರಿಗೆ ಸದ್ಬಳಕೆಯಾಗಲಿ ಎಂದರು.

ಶ್ರೀ ವೈದ್ಯನಾಥೇಶ್ವರ ಸಮೂಹ ದೇವಾಲಯಗಳ ಮುಖ್ಯ ಅರ್ಚಕ ಆನಂದ್ ದೀಕ್ಷಿತ್ ಮಾತನಾಡಿ, ದೇವಾಲಯದ ಆಸುಪಾಸಿನಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನವು ಕೆಲವೇ ದಿನಗಳಲ್ಲಿ ಮಾದರಿ ಭವನವಾಗಿ ಬಹಳಷ್ಟು ಎತ್ತರಕ್ಕೆ ಬೆಳೆಯಲಿದೆ. ಇಲ್ಲಿರುವ ಪದಾಧಿಕಾರಿಗಳು ಸಮಾಜಮುಖಿಯಾಗಿರುವುದರಿಂದ ಯಾವುದೇ ಲಾಭ, ಪ್ರತಿಫಲಾಪೇಕ್ಷೆವಿಲ್ಲದ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಮಾದರಿಯಾಗಿದ್ದಾರೆ ಎಂದರು.

ನೂತನ ಕನ್ನಡ ಭವನ ಭೂಮಿ ಪೂಜೆ ಕಾರ್ಯ ಬಾಲಕೃಷ್ಣನಂದ ಮಠದ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮಿ ಸಾನ್ನಿಧ್ಯದಲ್ಲಿ ಹೋಬಳಿ ಘಟಕದ ಕಸಾಪ ಅಧ್ಯಕ್ಷ ವೆಂಕಟೇಶ್ ವಿನಾಯಕ ಅಧ್ಯಕ್ಷತೆಯಲ್ಲಿ ನೆರವೇರಿತು.

ಕಸಾಪ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸರಾವ್, ನರೇಂದ್ರ, ಗ್ರಾಪಂ ಸದಸ್ಯೆ ಪಾರ್ವತಮ್ಮ, ಸುಂದರ್ ರಾಜ್, ಜಿ.ನಾಗರಾಜ್, ಮಠದ ಸುಹಾಸ್, ದೀಪಕ್, ರೋಹನ್, ಗೋವಿಂದರಾಜು, ಶಿವರಾಜ್, ಶ್ರೀನಿವಾಸ ಗೌಡ, ಮಹದೇವಸ್ವಾಮಿ, ಸುರೇಶ್, ಕೆ.ಕುಮಾರ್, ಸೋಮಣ್ಣ, ಮಹದೇವ್, ರಾಜು, ಕೂಸಪ್ಪ, ಕೃಷ್ಣ, ನಾಗೇಶ್, ಅರುಣ್ ಕುಮಾರ್, ಅರ್ಚಕ ಜಗದೀಶ್ ಇತರರು ಇದ್ದರು.