ಹಿರೀಸಾವೆ: ಶಿಥಿಲಗೊಂಡಿರುವ ಗ್ರಾಮದ ಪ್ರಮುಖ ರಸ್ತೆಯಲ್ಲಿನ ದೊಡ್ಡ ಸೇತುವೆಯ ಮರು ನಿರ್ಮಾಣ ಕಾಮಗಾರಿಯನ್ನು ಎರಡೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಹಳೇ ಬಿಎಂ ರಸ್ತೆಯಲ್ಲಿರುವ ದೊಡ್ಡ ಸಂಪರ್ಕ ಸೇತುವೆಯ ಮರು ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪಿಡಬ್ಲ್ಯುಡಿ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ದೊಡ್ಡ ಸೇತುವೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಸುಮಾರು 40-45 ವರ್ಷಗಳ ಹಿಂದೆ ಈ ದೊಡ್ಡ ಸೇತುವೆ ನಿರ್ಮಾಣವಾಗಿದ್ದು, ಬೆಂಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಇತ್ತೀಚಿನ ವರ್ಷಗಳಿಂದ ಶಿಥಿಲಾವಸ್ಥೆ ತಲುಪಿದೆ. ಸ್ಥಳಿಯ ಮುಖಂಡರು ಹಾಗೂ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಅನುದಾನ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ದೊಡ್ಡ ಸೇತುವೆ ಮರು ನಿರ್ಮಾಣದ ಜತೆಗೆ ಎರಡೂ ಬದಿಯಲ್ಲಿ ಸಾರ್ವಜನಿಕರು ಸಂಚರಿಸಲು ಸುಮಾರು 230 ಮೀಟರ್ ಉದ್ದದ ಇಂಟರ್‌ಲಾಕ್ ವ್ಯವಸ್ಥೆಯೊಂದಿಗೆ ಪಾದಚಾರಿಗಳ (ಫುಟ್‌ಬಾತ್) ರಸ್ತೆ ನಿರ್ಮಾಣವಾಗಲಿದೆ ಎಂದರು.
ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಶಾಲೆಗೆ ಈ ಪ್ರಸಕ್ತ ಸಾಲಿನಲ್ಲಿಯೇ ಹೊಸ 2 ಕೊಠಡಿಗಳು ಮಂಜೂರಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ದಿನದಿಂದ ದಿನಕ್ಕೆ ತಾಲೂಕು ಮಟ್ಟಕ್ಕೆ ಬೆಳೆಯುತ್ತಿರುವ ಹೋಬಳಿ ಕೇಂದ್ರ ಹಿರೀಸಾವೆ ಗ್ರಾಮಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ರಾಮೇಗೌಡ, ಮಾಜಿ ಅಧ್ಯಕ್ಷ ಎಚ್.ಜೆ.ಮಹೇಶ್, ಪಿಡಬ್ಲುೃಡಿ ಎಇ ಮಂಜಣ್ಣಗೌಡ, ಎಇಇ ಕೆ.ರುಕ್ಮಿಣಿ, ಗುತ್ತಿಗೆದಾರ ಸುಹಾಸ್ ಪಾಟೀಲ್, ಪ್ರಮುಖರಾದ ಆಯರಹಳ್ಳಿ ಪ್ರಭಾಕರ್, ರಾಮೇಗೌಡ, ಫೈನಾನ್ಸ್ ಮಹೇಶ್ ಹಾಗೂ ಇತರರು ಇದ್ದರು.