ಬಾಳೆಪುಣಿ ಗ್ರಾ.ಪಂ. ಅಧೀನದಲ್ಲಿರುವ ಮೈದಾನ. 
ಜಿಲ್ಲೆ

ಗುರಿಮುಟ್ಟದ ರಂಗ ಮಂದಿರ! : ಕಳ್ಳರ ಪಾಲಾದ ಪರಿಕರ : ಖಾಸಗಿ ಪಾಲಾಗಿದ್ದ ಕ್ವಾರಿಯೀಗ ಪಂಚಾಯಿತಿ ಆಸ್ತಿ

ಸೌಮ್ಯ ಆರ್

ಅನ್ಸಾರ್ ಇನೋಳಿ, ಉಳ್ಳಾಲ

ವಿಶಾಲ ಮೈದಾನ, ಮೂಕವಾಗಿ ರೋಧಿಸುತ್ತಿರುವ ಅರೆಬರೆ ರಂಗಮಂದಿರ. ಕಳ್ಳರ ಕೈಚಳಕಕ್ಕೆ ಸಿಲುಕಿ ಗಿಡ, ಬಳ್ಳಿಗಳ ನಡುವೆ ಯಾರಿಗೂ ಬೇಡವಾಗಿ ಅಡಗಿ ಕುಳಿತು ಕಾಯಕಲ್ಪಕ್ಕೆ ಕಾಯುತ್ತಿರುವ ಶೌಚಗೃಹ. ಇದು ಬಾಳೆಪುಣಿ ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ಜಮೀನಿನ ಕಥೆ!

ಮೈದಾನವಾದ ಕಲ್ಲು ಕ್ವಾರಿ

20 ವರ್ಷಗಳ ಹಿಂದೆ ಸ್ಥಳೀಯರು ಜವಾಹರ್ ಶಾಲಾ ಮೈದಾನದಲ್ಲಿ ಕ್ರೀಡಾಕೂಟಗಳನ್ನು ನಡೆಸುತ್ತಿದ್ದರು. ಗ್ರಾಮಕ್ಕೊಂದು ಆಟದ ಮೈದಾನ ಬೇಕೆನ್ನುವ ನೆಲೆಯಲ್ಲಿ ಬಾಳೆಪುಣಿ ಗ್ರಾಮ ಪಂಚಾಯಿತಿಯ ಅಂದಿನ ಸದಸ್ಯ, ಹಾಲಿ ಉಪಾಧ್ಯಕ್ಷ ಅಹ್ಮದ್ ಬಶೀರ್ 2004ರಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದರು. ಇದಕ್ಕೆ ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಎ.ಸಿ.ಭಂಡಾರಿ ಅವರನ್ನು ಆಹ್ವಾನಿಸಲಾಗಿದ್ದು, ಬಳಿಕ ಮೈದಾನದ ಬೇಡಿಕೆಯಿಟ್ಟು ಮನವಿ ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ್ದ ಭಂಡಾರಿ, ಮುಡಿಪು ಸಮೀಪ ಗುರುತಿಸಲ್ಪಟ್ಟ 5.43 ಎಕರೆ ಜಮೀನಿಗೆ ಭೇಟಿ ನೀಡಿ ಮೈದಾನಕ್ಕೆ ಮೀಸಲಿಡುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದಲ್ಲದೆ 75 ಸಾವಿರ ರೂ. ಅನುದಾನ ನೀಡಿದ್ದರು. ಆ ಸಂದರ್ಭ ಈ ಜಮೀನಿನಲ್ಲಿ ಖಾಸಗಿಯವರು ಕ್ವಾರಿ ಮಾಡಿ ಕಲ್ಲು ತೆಗೆಯುತ್ತಿದ್ದರಿಂದ ಹೊಂಡಗಳಿಂದ ತುಂಬಿತ್ತು.

ಜಿ.ಪಂ.ನ 75 ಸಾವಿರ ರೂ. ಅನುದಾನದಲ್ಲಿ ಪಂಚಾಯಿತಿಯ ಅಂದಿನ ಅಧ್ಯಕ್ಷ ಜನಾರ್ದನ ಗಟ್ಟಿ ಮತ್ತು ಬಶೀರ್ ಅವರು ಒಂದು ಎಕರೆ ಜಾಗ ಸಮತಟ್ಟುಗೊಳಿಸಿದ್ದು, ಬಳಿಕ ಮನವಿ ಮೇರೆಗೆ ಇನ್ಫೋಸಿಸ್ ಒಂದು ಲಕ್ಷ ರೂ. ಅನುದಾನ ಹಾಗೂ ಶಾಸಕ ಯು.ಟಿ. ಖಾದರ್ ಅವರ ಪೈಕಾ ಯೋಜನೆಯಲ್ಲಿ ಐದು ಲಕ್ಷ ರೂ. ಅನುದಾನ ನೀಡಿದ್ದರಿಂದ ಕ್ವಾರಿ ಸಂಪೂರ್ಣ ಸಮತಟ್ಟುಗೊಳಿಸಿ ಮೈದಾನದ ರೂಪ ನೀಡಲಾಗಿತ್ತು.

ಗುರಿ ಮುಟ್ಟದ ರಂಗಮಂದಿರ!

ಬಳಿಕ ಈ ಮೈದಾನದಲ್ಲಿ ಕ್ರೀಡಾಕೂಟಗಳು, ಸಾಮೂಹಿಕ ಮದುವೆ ಸಮಾರಂಭ ನಡೆಸುತ್ತಾ ಬರಲಾಗಿತ್ತು. ಇಲ್ಲೊಂದು ಕೋಟೆ ರಂಗಮಂದಿರ ನಿರ್ಮಿಸಿದರೆ ಪಂಚಾಯಿತಿಗೆ ಆದಾಯ ಆಗುತ್ತದೆ ಎನ್ನುವ ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ, ಹಾಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಜಿ.ಪಂ. ಸದಸ್ಯರ ಎಂಟು ಲಕ್ಷ ರೂ.ಅನುದಾನದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಮುಂದಾದರು.

ಕದ್ರಿ ರಂಗಮಂದಿರದ ಯೋಜನೆ ರೂಪಿಸಿದ್ದ ಇಂಜಿನಿಯರನ್ನು ಕರೆತಂದು ಅದೇ ಮಾದರಿಯಲ್ಲಿ ಎರಡು ಕಡೆಗೆ ಕೋಣೆಗಳು ಹಾಗೂ ತೆರೆದ ಸಭಾಂಗಣದ ಕಾಮಗಾರಿ ಆರಂಭಿಸಲಾಗಿತ್ತು. ಒಂದು ಹಂತದ ಕಾಮಗಾರಿ ಮುಗಿಯಿತು ಎಂದಾಗ ಜಿ.ಪಂ. ಅಧಿಕಾರ ಮುಗಿದಿದ್ದು, ಕಳೆದ ನಾಲ್ಕು ವರ್ಷಗಳಿಂದ ಚುನಾವಣೆಯೂ ನಡೆಯದೆ ರಂಗಮಂದಿರ ಅಲ್ಲಿಗೇ ಬಾಕಿಯಾಗಿದೆ.

ಕಳ್ಳರ ಪಾಲಾದ ಶೌಚಗೃಹ ಪರಿಕರ!

ಈ ಮೈದಾನದಲ್ಲಿ ಕಾರ್ಯಕ್ರಮ, ಕ್ರೀಡಾಕೂಟ ನಡೆಸುವವರ ಅನುಕೂಲಕ್ಕಾಗಿ ನಿರ್ಮಲ ಭಾರತ್ ಯೋಜನೆಯಡಿ ಜಿಲ್ಲಾ ಪಂಚಾಯಿತಿಯ 2 ಲಕ್ಷ ಹಾಗೂ ಗ್ರಾ.ಪಂ.ನ 82 ಸಾವಿರ ರೂಪಾಯಿ ಅನುದಾನದಲ್ಲಿ ಎರಡು ಶೌಚಗೃಹ ನಿರ್ಮಿಸಲಾಗಿತ್ತು. ಪ್ರತಿವರ್ಷ ಮೈದಾನದಲ್ಲಿ ಎಸ್‌ವೈಎಸ್ ಸಂಘಟನೆಯಿಂದ ಸಾಮೂಹಿಕ ವಿವಾಹ ನಡೆಸುವ ಸಂದರ್ಭ ಸಂಘಟಕರು ಇದರ ನಿರ್ವಹಣೆ ಮಾಡುತ್ತಿದ್ದರು. ಒಂಬತ್ತು ವರ್ಷ ಕಾರ್ಯಕ್ರಮ ನಡೆದಿದ್ದು, ಹತ್ತನೇ ವರ್ಷಕ್ಕೆ ಕರೊನಾ ಬಂದಿದ್ದು, ಬಳಿಕ ಕಾರ್ಯಕ್ರಮ ನಡೆಯಲಿಲ್ಲ.

ಇದರಿಂದ ಶೌಚಗೃಹ ಬಳಕೆ ನಿಂತಿದ್ದು, ಕಬ್ಬಿಣದ ಬಾಗಿಲು ಸಹಿತ ಎಲ್ಲ ಪರಿಕರಗಳು ಕಳ್ಳರ ಪಾಲಾದವು. ಪ್ರಸ್ತುತ ಶೌಚಗೃಹದ ಸುತ್ತಲೂ ಮರಗಳು ಬೆಳೆದು ಹತ್ತಿರ ಹೋಗುವುದೇ ಸವಾಲೆನಿಸಿದೆ. ಬೀದಿನಾಯಿಗಳ ವಾಸ ಸ್ಥಾನ ಆಗಿ ಪರಿವರ್ತನೆಯಾಗಿದ್ದು, ಆತಂಕಕ್ಕೂ ಕಾರಣವಾಗಿದೆ.

ಮೈದಾನದಲ್ಲಿ ಅರ್ಧ ನಿರ್ಮಾಣವಾಗಿರುವ ರಂಗಮಂದಿರ

ಶಾಸಕರ ಭರವಸೆಯಲ್ಲಿ ಗ್ರಾಮಸ್ಥರು

ಜಿಲ್ಲಾ ಪಂಚಾಯಿತಿ ಚುನಾವಣೆ ನಡೆದು ಹೊಸ ಆಡಳಿತ ಯಾವಾಗ ಬರುತ್ತದೆ ಎನ್ನುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಹೀಗಿರುವಾಗ ರಂಗಮಂದಿರಕ್ಕೆ ಕಾಯಕಲ್ಪ ನೀಡಲು ಶಾಸಕರ ಅನುದಾನದಿಂದಷ್ಟೇ ಸಾಧ್ಯ. ರಂಗಮಂದಿರದ ಜತೆ ಉತ್ತಮ ಮೈದಾನ ನಿರ್ಮಾಣದ ಭರವಸೆ ಶಾಸಕರಿಂದ ಸಿಕ್ಕಿದೆ. ಅಲ್ಲದೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ 10 ಲಕ್ಷ ರೂ. ಅನುದಾನ ಪಂಚಾಯಿತಿಯಲ್ಲಿ ಖರ್ಚಾಗದೆ ಉಳಿದಿದ್ದು, ಇದನ್ನೂ ಬಳಸಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಾಳೆಪುಣಿ ಗ್ರಾಮದಲ್ಲಿ ಉತ್ತಮ ಮೈದಾನ, ರಂಗಮಂದಿರ ನಿರ್ಮಾಣ ಶೀಘ್ರ ಆಗುವ ನಿರೀಕ್ಷೆ ಗ್ರಾಮಸ್ಥರದ್ದು.

ಉಳ್ಳಾಲ ತಾಲೂಕಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಒತ್ತು ನೀಡಿ ತೊಕ್ಕೊಟ್ಟು ಮತ್ತು ಬಾಳೆಪುಣಿ ಮೈದಾನ ಅಭಿವೃದ್ಧಿಪಡಿಸಲಾಗುವುದು, ಬಾಳೆಪುಣಿಯಲ್ಲಿ ಮಿನಿ ಸ್ಟೇಡಿಯಂ ನಿರ್ಮಿಸಲಾಗುವುದು. ಬಳಿಕ ಗ್ರಾಮೀಣ ಭಾಗದಲ್ಲಿ ಮೈದಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ. - ಯು.ಟಿ.ಖಾದರ್, ಸ್ಪೀಕರ್ ಈ ಮೈದಾನ ಪಂಚಾಯಿತಿಗೆ ದೊಡ್ಡ ಆಸ್ತಿಯಾಗಿದ್ದು, ಜಿಪಂನ ಎಂಟು ಲಕ್ಷ ರೂ.ಅನುದಾನದಲ್ಲಿ ರಂಗ ಮಂದಿರ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಜಿ.ಪಂ. ಆಡಳಿತ ಅಸ್ತಿತ್ವದಲ್ಲಿಲ್ಲದ ಕಾರಣ ಗ್ರಾ.ಪಂ. ಮತ್ತು ಶಾಸಕರ ಅನುದಾನದಲ್ಲಿ ಮುಂದುವರಿಸುವಂತೆ ಮನವಿ ಮಾಡಲಾಗಿದೆ. - ಮಮತಾ ಡಿ.ಎಸ್.ಗಟ್ಟಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ 10 ಲಕ್ಷ ರೂ. ಖರ್ಚಾಗದೆ ಪಂಚಾಯಿತಿಯಲ್ಲಿ ಉಳಿದಿದೆ. ಸ್ಪೀಕರ್ ಅವರು ಹೆಚ್ಚಿನ ಅನುದಾನ ಭರವಸೆ ನೀಡುವ ಭರವಸೆ ನೀಡಿದ್ದು, ಉಳಿದಿರುವ 10 ಲಕ್ಷ ರೂ. ಹಾಗೂ ಸ್ಪೀಕರ್ ಅನುದಾನ ಬಳಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗುವುದು. - ಅಹ್ಮದ್ ಬಶೀರ್, ಬಾಳೆಪುಣಿ ಗ್ರಾ.ಪಂ. ಉಪಾಧ್ಯಕ್ಷ.