ಜಿಲ್ಲೆ

ಮಳೆಗೆ ನೆಲಕಚ್ಚಿದ ಭತ್ತ

ಬಸವರಾಜ ವೀರಪ್ಪ ಗರಗ

ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ಹಲವೆಡೆ ಸೋಮವಾರ ಗುಡುಗು ಸಹಿತ ಮಳೆ ಸುರಿಯಿತು. ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿನ ಕೊರ್ಲಹಳ್ಳಿ, ಗಂಗಾಪುರ, ಶಿಂಗಟಾಲೂರು, ಹಮ್ಮಿಗಿ ಮೊದಲಾದ ಕಡೆಗಳಲ್ಲಿ ಭಾರಿ ಮಳೆಯಿಂದಾಗಿ ಭತ್ತದ ಬೆಳೆ ನೆಲಕಚ್ಚಿದೆ.

ಈಗಾಗಲೇ ಭತ್ತದ ಬೆಳೆ ಕಟಾವು ಹಂತಕ್ಕೆ ಬಂದಿದೆ. ಇನ್ನೇನು 15-20 ದಿನದಲ್ಲಿ ಭತ್ತದ ಕಟಾವು ಮಾಡಬೇಕಾಗಿತ್ತು. ಆಗಾಗ ಸುರಿಯುತ್ತಿರುವ ಮಳೆಯಿಂದ ಭತ್ತ ಬೆಳೆ ನೆಲಕಚ್ಚುತ್ತಿದೆ. ಭತ್ತದ ಬೆಳೆ ನೆಲಕಚ್ಚುವುದರಿಂದ ಭತ್ತದ ಕಾಳು ಕಪ್ಪಾಗುವುದು, ಭತ್ತದ ಬೆಳೆ ಕೊಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ ಭತ್ತದ ಗದ್ದೆಯಲ್ಲಿ ನೀರು ಇಲ್ಲದಿದ್ದರೂ ತೇವಾಂಶದಿಂದ ಮೊಳಕೆಯೊಡೆದು ಸಸಿ ಹುಟ್ಟಿಕೊಳ್ಳುತ್ತದೆ. ಇದರಿಂದಾಗಿ ಭತ್ತ ಬೆಳೆ ನಷ್ಟವಾಗಿ ರೈತರು ಪರದಾಡಬೇಕಾಗುತ್ತದೆ. ತಾಲೂಕಿನಲ್ಲಿ ಹತ್ತು ದಿನಗಳಿಂದ ಮೋಡ ಕವಿದ ವಾತಾವರಣ ಜತೆಗೆ ಆಗಾಗ ಮಳೆ ಸುರಿಯುತ್ತಿದೆ. ಮಳೆಯಿಂದ ಕಟಾವು ಹಂತದಲ್ಲಿರುವ ಹಲವು ಬೆಳೆಗಳು ಹಾನಿಯಾಗುತ್ತಿವೆ. ಹಿಂಗಾರು ಬಿತ್ತನೆ ಮಾಡುವುದಕ್ಕೂ ಅವಕಾಶ ನೀಡುತ್ತಿಲ್ಲ. ಬಿತ್ತನೆಮಾಡಿದ ಬೆಳೆಯು ಹಾನಿಯಾಗುವ ಆತಂಕ ಹೆಚ್ಚಿದೆ.