ಅಥಣಿ ಕರ್ನಾಟಕ ಒನ್ ಕೇಂದ್ರದಲ್ಲಿ ಅಡಹಳ್ಳಿ ಗ್ರಾಮದ ಪಡಿತರ ಚೀಟಿದಾರರು ಗಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಲು ಸರದಿ ನಿಂತಿರುವುದು. 
ಜಿಲ್ಲೆ

ಗೃಹಲಕ್ಷ್ಮೀಗೆ ‘ಸರ್ವರ್ ಸಂಕಷ್ಟ’

ಶಂಕರ ಗೆಜ್ಜಿ

ಬೆಳಗಾವಿ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮೀ ಯೋಜನೆಗೆ ಲಾನುಭವಿಗಳಾಗಲು ಮಹಿಳೆಯರು ಅರ್ಜಿ ಸಲ್ಲಿಕೆಗೆ ಮುಗಿಬೀಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸೈಬರ್ ಕೇಂದ್ರಗಳ ಸಿಬ್ಬಂದಿ ಯಜಮಾನಿಗಳಿಂದ ಹಣ ಸುಲಿಗೆ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಯೋಜನೆಗೆ ಅರ್ಹರಾಗಿರುವ 14 ಲಕ್ಷಕ್ಕೂ ಅಕ ಕುಟುಂಬಗಳ ಯಜಮಾನಿಯರಿದ್ದು, ಯೋಜನೆಯ ಅರ್ಜಿ ಸಲ್ಲಿಕೆಗೆ ಜಿಲ್ಲೆಯ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರ, ಬೆಳಗಾವಿ ಮಹಾನಗರ ಹಾಗೂ ಇತರ ನಗರ ಸಭೆಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರಕ್ಕೂ ದಿನವೂ ನೂರಾರು ಮಹಿಳೆಯರು ಆಗಮಿಸುತ್ತಿದ್ದಾರೆ. ಅರ್ಜಿ ಸಲ್ಲಿಸಲು ಮಹಿಳೆಯರ ನಡುವೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದ್ದು, ಸರ್ವರ್ ಸಮಸ್ಯೆಯಿಂದ ದಿನವೀಡಿ ಮಳೆಯಲ್ಲೇ ಕಾಯುವ ಸ್ಥಿತಿ ಬಂದೊದಗಿದೆ.

ಪ್ರತಿ ಕೇಂದ್ರಕ್ಕೆ ದಿನವೊಂದಕ್ಕೆ 60 ಅರ್ಜಿ ಸ್ವೀಕಾರದ ಗುರಿ ನಿಗದಿ ಪಡಿಸಲಾಗಿದ್ದು, ಸಂಭವನೀಯ ಲಾನುಭವಿಗಳ ಮೊಬೈಲ್ ಸಂಖ್ಯೆಗೆ ಅರ್ಜಿ ಸಲ್ಲಿಕೆ ಕೇಂದ್ರ ಮತ್ತು ದಿನ ನಿಗದಿಪಡಿಸಿ ಸಂದೇಶ ಕಳುಹಿ ಸಲಾಗುತ್ತಿದೆ. ಅದನ್ನು ಆಧರಿಸಿ ಸಾವಿರಾರು ಜನರಿಗೆ ಅರ್ಜಿ ಸಲ್ಲಿಕೆಗೆ ಸೂಚನೆ ಬರುತ್ತಿದ್ದು ಸೇವಾ ಕೇಂದ್ರಗಳಿಗೆ ತೆರಳಿದರೆ ಅಲ್ಲಿ ಸರ್ವರ್ ಸಮಸ್ಯೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ, ‘ಕಳೆದ ಮೂರ‌್ನಾಲ್ಕು ದಿನಗಳ ಹಿಂದೆ ಸರ್ವಸ್ ಸಮಸ್ಯೆ ಇತ್ತು. ಅದನ್ನು ಸರ್ಕಾರ ಸರಿಪಡಿಸಿದೆ. ಇದೀಗ ಸಾಕಷ್ಟು ಅರ್ಜಿ ಸಲ್ಲಿಕೆಯಾಗುತ್ತಿವೆ’ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ, ಕೇಂದ್ರಗಳ ಸಿಬ್ಬಂದಿ ಮಾತ್ರ ಅರ್ಜಿ ಸಲ್ಲಿಕೆಗೆ ಬಂದ ಮಹಿಳೆಯರಿಗೆ ಸರ್ವರ್ ಸಮಸ್ಯೆ ಇದೆ ಎಂದು ದಿನವಿಡೀ ಕಾಯಿಸುವುದು ಬಿಟ್ಟಿಲ್ಲ. ಹೀಗಾಗಿ, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಸಿಬ್ಬಂದಿ ಮೇಲೆ ಅನುಮಾನ ದಟ್ಟವಾಗಿದೆ.
ಪ್ರತಿ ಕೇಂದ್ರದಿಂದ ದಿನವೂ ನೂರಾರು ಮಹಿಳೆಯರು ಅರ್ಜಿಸಲು ಸಲ್ಲಿಸಲು ಸಾಧ್ಯವಾಗದೆ ಇದ್ದುದರಿಂದ ನಿರಾಸೆಯಿಂದ ವಾಪಸ್ಸಾಗುವುದು ಸಾಮಾನ್ಯವಾಗಿದೆ. ತಮ್ಮ ಸರತಿಗಾಗಿ ಮಳೆಯಲ್ಲಿ ದಿನವಿಡೀ ಕಾಯುವವರಿಗೆ ಮಣೆಹಾಕದ ಸಿಬ್ಬಂದಿಯು, ತಮ್ಮ ಜೇಬು ಬಿಸಿ ಮಾಡುವವರಿಗೇ ಆದ್ಯತೆ ನೀಡಿ, 50, 100-200 ರೂ.ವರೆಗೆ ಸುಲಿಗೆ ನಡೆಸುತ್ತಿರುವುದು ಕಂಡುಬರುತ್ತಿದೆ.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ವಡಗಾವಿ ನಿವಾಸಿ ಉಜ್ವಲಾ ಪಾಟೀಲ. ‘ಜು.20ರಂದೇ ಅರ್ಜಿ ಸಲ್ಲಿಸಲು ದಿನ ನಿಗದಿಪಡಿಸಿ ಸಂದೇಶ ಬಂದಿದೆ. ಕೂಲಿ ಕೆಲಸ ಅಷ್ಟೇ ಸೋರುವ ಮನೆಯಲ್ಲಿ ಸಣ್ಣ ಮಕ್ಕಳನ್ನು ಬಿಟ್ಟು ಬಂದು ಮೂರು ದಿನ ಬೆಳಿಗ್ಗೆಯಿಂದ ಕಾದಿದ್ದೇನೆ. ಆದರೆ, ನಮಗಿಂತಲೂ ಮೊದಲೇ ದಿನ ನಿಗದಿಯಾಗಿದೆ ಎಂದು ಯಾರ ಯಾರದ್ದೇ ದಾಖಲೆ ಪಡೆದು ಅರ್ಜಿ ಹಾಕುತ್ತಾರೆ. ನಮಗೆ ಮಾತ್ರ ಬೆಳಗಾವಿ ಒನ್ ಸಿಬ್ಬಂದಿ ಸರ್ವರ್‌ಸಮಸ್ಯೆ ಇದೆ ನಾಳೆ ಬನ್ನಿ, ಪ್ರಯತ್ನಿಸುತ್ತೇವೆ ಎಂದು ಸಂಜೆ ಹೇಳಿ ಕಳುಹಿಸುತ್ತಿದ್ದಾರೆ. ಸಹಾಯವಾಣಿಗೆ ಕರೆ ಮಾಡಿದರೆ ಸ್ಪಂದನೆ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನ್ಯರ ಲಾಗಿನ್ ಐಡಿ ದುರ್ಬಳಕೆ

ಆನ್‌ಲೈನ್ ಅರ್ಜಿ ಸಲ್ಲಿಕೆ ಕೇಂದ್ರಗಳಿಗೆ ಸರ್ಕಾರದಿಂದ ಒಂದು ಅರ್ಜಿಗೆ 20 ರೂ.ನೀಡಲಾಗುತ್ತಿದ್ದರೂ ಮೂಡಲಗಿ ತಾಲೂಕಿನ ಆನ್‌ಲೈನ್ ಕೇಂದ್ರಗಳಲ್ಲಿ ಮಾತ್ರ ಹಣ ಸುಲಿಗೆ ಮಾತ್ರ ನಿಂತಿಲ್ಲ. ಅರ್ಜಿ ಹಾಕಲು ಅವಕಾಶವಿರದ ಖಾಸಗಿ ಆನ್‌ಲೈನ್ ಕೇಂದ್ರದವರು ಬೇರೆಯವರ ಲಾಗಿನ್ ಐಡಿ ಪಡೆದು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅದನ್ನೇ ಬಂಡಳವಾನ್ನಾಗಿಸಿಕೊಂಡ ಕೇಂದ್ರಗಳು ಹಾಗೂ ಖಾಸಗಿ ಆನ್‌ಲೈನ್ ಕೇಂದ್ರಗಳು ಅರ್ಜಿ ಸಲ್ಲಿಕೆಯಾದ ನಂತರದ ಸ್ವೀಕತಿ ಅರ್ಜಿ ಪ್ರಿಂಟ್ ನೆಪದಲ್ಲಿ ಕಲರ್ ಪ್ರಿಂಟ್ ತೆಗೆದು ನಾಮಿನೇಷನ್ ಮಾಡಿಕೊಡುವುದಾಗಿಯೂ ಅನಗತ್ಯ ಹೊರೆ ಮಾಡುತ್ತಿದ್ದಾರೆ.

ಸಂದೇಶ ತಂದೊಡ್ಡಿದ ಸಮಸ್ಯೆ..!

ಅರ್ಜಿ ಸಲ್ಲಿಕೆಯ ದಿನ ನಿಗದಿಪಡಿಸುವ ಸಂದೇಶದಲ್ಲಿ ಅರ್ಜಿದಾರರು ವಾಸಿಸುವ ಗ್ರಾಪಂ ಅಥವಾ ವಾರ್ಡ್ ನಲ್ಲಿನ ಕೇಂದ್ರಗಳ ಬದಲಾಗಿ 20-25 ಕಿ.ಮೀ ದೂರದೂರಿನ ಕೇಂದ್ರಕ್ಕೆ ಬರುತ್ತಿದೆ. ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿರುವ ಬಹುತೇಕರಿಗೆ ಅಥಣಿ ಪಟ್ಟಣದಲ್ಲಿರುವ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಹೋಗಲು ಸಂದೇಶ ಬಂದಿದ್ದು, ಅಂಥ ಕೇಂದ್ರಲ್ಲಿ ವಿಚಾರಿಸಿದರೆ, ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದು, ಜನ ರೋಸಿಹೋಗಿದ್ದಾರೆ. ‘ಗೊಂದಲ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅಥಣಿ ತಹಸೀಲ್ದಾರ್ ಬಿ.ಎಸ್.ಕಡಕಬಾವಿ ಅಭಯ ನೀಡಿದ್ದಾರೆ. ಆದರೆ, ಅಲೆದಾಟ ಮಾತ್ರ ಇನ್ನೂ ತಪ್ಪಿಲ್ಲ.

ಮಹಿಳೆಯರಿಂದ ಹಣ ಪಡೆಯುತ್ತಿದ್ದ ಆರೋಪದ ಮೇಲೆ ನಾಲ್ಕು ಕೇಂದ್ರಗಳ ಲಾಗ್ ಇನ್ ಐಡಿ, ಪಾಸ್‌ವರ್ಡ್ ವಾಪಸ್ ಪಡೆದು ಮತ್ತೊಬ್ಬರಿಗೆ ವಹಿಸಿದ್ದೇವೆ. ಪ್ರತಿ ಅರ್ಜಿಗೆ 12 ರೂ.ಸೇವಾ ಶುಲ್ಕ ಸರ್ಕಾರವೇ ನೀಡುತ್ತಿದ್ದರೂ ಹಣ ವಸೂಲಿ ಮಾಡಿದವರ ವಿರುದ್ಧ ಕ್ರಮಿನಲ್ ಕೇಸ್ ಹಾಕಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಕಾರಿಗಳಿಗೆ ಸೂಚಿಸಲಾಗಿದೆ. ಜನರ ದೂರುಗಳಿಗೆ ಪಿಡಿಒ, ಆರ್‌ಐ ಹಾಗೂ ತಹಸೀಲ್ದಾರ್ ಅಸಡ್ಡೆ ಮಾಡಿದರೆ ಸರ್ಕಾರ ಶಿಸ್ತು ಕ್ರಮ ಜರುಗಿಸಲಿದೆ.| ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

| ರವಿ ಗೋಸಾವಿ ಬೆಳಗಾವಿ