ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಅಧ್ಯಕ್ಷತೆಯಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕುರಿತು ಸಭೆ ಜರುಗಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಅಮರೇಶ ಇದ್ದರು. 
ಜಿಲ್ಲೆ

ಪಲಾನುಭವಿಗಳ ನೋಂದಣಿಗೆ ಸಕಲ ಸಿದ್ಧತೆ

ಬಾಗಲಕೋಟೆ: ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ರಾಜ್ಯಾದ್ಯಂತ ಜು.19 ರಂದು ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾದ್ಯಂತ ಪಲಾನುಭವಿಗಳ ನೋಂದಣಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಗೃಹಲಕ್ಷ್ಮೀ ಯೋಜನೆಯ ಲಾನುಭವಿಗಳ ನೋಂದಣಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಜತೆ ಭಾನುವಾರ ವಿಡಿಯೋ ಸಂವಾದದ ನಡೆಸಿದ ಬಳಿಕ ಸಭೆಯಲ್ಲಿ ಮಾತನಾಡಿದ ಅವರು, ಜು.19 ರಂದು ಸಂಜೆ ಮುಖ್ಯಮಂತ್ರಿಗಳು ಯೋಜನೆಗೆ ಚಾಲನೆ ನೀಡಲಿದ್ದು, ಜು.20 ರಿಂದ ಗೃಹಲಕ್ಷ್ಮೀ ಲಾನುಭವಿಗಳು ಜಿಲ್ಲೆಯಲ್ಲಿರುವ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.

ನೋಂದಣಿ ಪ್ರಾರಂಭವಾಗಿದೆ ಎಂದು ಏಕಕಾಲದಲ್ಲಿ ಮಹಿಳಾ ಲಾನುಭವಿಗಳು ಸೇವಾ ಕೇಂದ್ರಗಳಿಗೆ ಹೋಗುವಂತಿಲ್ಲ. ಪ್ರತಿ ದಿನ ಒಂದು ಕೇಂದ್ರದಲ್ಲಿ 60 ಲಾನುಭವಿಗಳ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿರುವ ಪಡಿತರ ಚೀಟಿ ಕಾರ್ಡ್‌ಗಳು ಹಾಗೂ ಮಹಿಳೆಯ ಮನೆಯ ಯಜಮಾನಿ ಆಗಿರುವ ಬಗ್ಗೆ ಈಗಾಗಲೇ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಮಹಿಳೆಯರು ತಾವು ಯಾವ ನೋಂದಣಿ ಕೇಂದ್ರದಲ್ಲಿ ಮತ್ತು ಯಾವ ದಿನಾಂಕದಂದು ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ನೀಡಲಾಗುತ್ತದೆ. ಆ ದಿನದಂದು ಸೇವಾ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಲು ತಿಳಿಸಿದರು.

ನೋಂದಣಿ ಸಮಯದಲ್ಲಿ ಉಂಟಾಗುವ ಗೊಂದಲಗಳ ನಿವಾರಣೆಗೆ ಜಿಲ್ಲಾಧಿಕಾರಿಗಳ ಕಚೇರಿ, ಜಿಪಂ ಕಚೇರಿ, ತಹಸೀಲ್ದಾರ ಕಚೇರಿ ಹಾಗೂ ತಾಪಂ ಕಚೇರಿಗಳಲ್ಲಿ ಉಚಿತ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಸಹಾಯವಾಣಿ ಸಂಖ್ಯೆ 1902ಗೆ ಕರೆ ಹಾಗೂ ಮೊ.ನಂ.8147500500ಗೆ ಎಸ್‌ಎಂಎಸ್ ಕೂಡ ಮಾಡಬಹುದು. ಭಾನುವಾರದ ರಜೆ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿಯೂ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಸುಗಮ ನೋಂದಣಿಗೆ ಅನುಕೂಲವಾಗುವಂತೆ ಅಗತ್ಯವಿರುವ ಕಂಪ್ಯೂಟರ್, ಪ್ರಿಂಟರ್, ಅಂತರ್ಜಾಲ ಸಂಪರ್ಕ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅರ್ಜಿ ಸಲ್ಲಿಕೆ ಪ್ರಾರಂಭದ ದಿನಗಳಲ್ಲಿ ನೋಂದಣಿ ಕೇಂದ್ರಗಳಲ್ಲಿ ಹೆಚ್ಚು ಜನ ಸಂದಣಿ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಂದು ನೋಂದಣಿ ಕೇಂದ್ರಕ್ಕೆ ಪೊಲೀಸ್ ಇಲಾಖೆಯಿಂದ ಅಗತ್ಯ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಅಲ್ಲದೆ, ಈ ಯೋಜನೆ ಬಗ್ಗೆ ಅರಿವು ಹಾಗೂ ಲಾನುಭವಿಗಳಲ್ಲಿ ಉಂಟಾಗುವ ಗೊಂದಲ ನಿವಾರಿಸಲು ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೇಲುಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ನೋಂದಣಿ ಕೇಂದ್ರಗಳಲ್ಲಿ ಉಂಟಾಗುವ ಒತ್ತಡವನ್ನು ತಪ್ಪಿಸಲು ಪ್ರತಿ ಸಾವಿರ ಜನಸಂಖ್ಯೆಗೆ ಪ್ರಜಾಪ್ರತಿನಿಧಿ (ಸಿಟಿಜನ್ ವ್ಯಾಲಂಟರ್ಸ್‌)ಗಳನ್ನು ನೇಮಿಸಲಾಗುತ್ತಿದೆ. ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇದ್ದಲ್ಲಿ ಪ್ರತಿ 500 ಹೆಚ್ಚುವರಿ ಜನಸಂಖ್ಯೆಗೆ ಒಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ನೇಮಿಸಲಾಗುತ್ತಿದೆ. ಪ್ರಜಾಪ್ರತಿನಿಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದನೆ ಮೇರೆಗೆ ಮಾಡಲಾಗುತ್ತಿದೆ. ಪ್ರಜಾಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಗ್ರಾಮ, ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಲಾನುಭವಿಗಳ ಅರ್ಜಿಗಳನ್ನು ನೋಂದಾಯಿಸುವ ಕಾರ್ಯ ಮಾಡಲಿದ್ದಾರೆ ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಅಮರೇಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶಿಲ್ಪಾ ಹಿರೇಮಠ, ಅನ್ನಪೂರ್ಣ ಕುಬಕಡ್ಡಿ, ಎಂ.ಡಿ.ದಾಸರ, ಬಸವಲಿಂಗಪ್ಪ ಕವಟೆಕರ, ದಸ್ತಗಿರಿಸಾಬ ಮುಲ್ಲಾ, ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ ಸ್ವಾಗತ ಗುಡಗುಡಿ ಸೇರಿ ಇತರರು ಉಪಸ್ಥಿತರಿದ್ದರು.