ಹೊನ್ನಾಳಿ: ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತಂದ ಏಕೈಕ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಮಂಗಳವಾರ ನಗರದ ಕನಕದಾಸ ರಂಗಮಂದಿರದಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ, ಐವರು ಮಹಿಳೆಯರಿಗೆ ಸಾಂಕೇತಿಕವಾಗಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಐದು ಭರವಸೆಗಳ ಪೈಕಿ ಈಗಾಗಲೇ ನಾಲ್ಕು ಭರವಸೆ ಈಡೇರಿಸಿದ್ದೇವೆ. ರಾಜ್ಯದಲ್ಲಿ ಒಟ್ಟು 1.28 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಲಾಭ ಪಡೆದರೆ, ನಮ್ಮ ಅವಳಿ ತಾಲೂಕಿನಲ್ಲಿ 51 ಸಾವಿರ ಕುಟುಂಬದ ಮಹಿಳೆಯರು ಈ ಸೌಲಭ್ಯ ಪಡೆದುಕೊಳ್ಳಲಿದ್ದಾರೆ ಎಂದರು.
ಹೊನ್ನಾಳಿ ಪುರಸಭೆ ಆವರಣ, ನ್ಯಾಮತಿ ಪಪಂ ಆವರಣದಲ್ಲಿ ಮತ್ತು ತಾಲೂಕಿನ 46 ಪಂಚಾಯಿತಿಗಳಲ್ಲಿ ಯೋಜನೆ ಏಕಕಾಲಕ್ಕೆ ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
ಅವಳಿ ತಾಲೂಕಿನಲ್ಲಿ 57,880 ಗುರಿ ಇದ್ದು, ಅದರಲ್ಲಿ 51 ಸಾವಿರ ಮಹಿಳೆಯರು ಮಾತ್ರ ತಮ್ಮ ನೋಂದಣಿ ಮಾಡಿಸಿದ್ದಾರೆ. ಹೀಗಾಗಿ, ಅವರ ಖಾತೆಗೆ ನೇರವಾಗಿ 2 ಸಾವಿರ ರೂ. ಇಂದು ಜಮಾ ಆಗಲಿದೆ. ಉಳಿದ ಮಹಿಳೆಯರು ನೋಂದಣಿ ಮಾಡಿಸಿದ ತಕ್ಷಣವೇ ಅವರ ಖಾತೆಗೂ ಜಮಾ ಆಗಲಿದೆ ಎಂದು ಹೇಳಿದರು.
ಈ ಸೌಲಭ್ಯಗಳಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಒಂದಿಷ್ಟು ಆರ್ಥಿಕ ಸಬಲತೆ ಕಾಣಲಿದೆ. ತುರ್ತು ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪ್ರತಿ ತಿಂಗಳು ನಮ್ಮ ತಾಲೂಕಿಗೆ 10ರಿಂದ 12 ಕೋಟಿ ಅನುದಾನ ಗೃಹಲಕ್ಷ್ಮೀ ಒಂದಕ್ಕೆ ಖರ್ಚು ಮಾಡಲಾಗುವುದು ಎಂದರು.
ಉಪವಿಭಾಗಾಧಿಕಾರಿ ರೇಷ್ಮಾ ಹಾನಗಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪುರಸಭಾ ಸದಸ್ಯರಾದ ಎಂ. ಸುರೇಶ್, ಹೊಸಕೇರಿ ಸುರೇಶ್, ಪುರಸಭಾ ಮುಖ್ಯಾಧಿಕಾರಿ ನಿರಂಜನಿ ಮಾತನಾಡಿದರು. ಯೋಜನೆ ನೋಡಲ್ ಅಧಿಕಾರಿ ಸಿಡಿಪಿಒ ಮಹಾಂತೇಶ್ ಪೂಜಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಪಂ ಇಒ ರಾಘವೇಂದ್ರ, ಪುರಸಭಾ ಮಾಜಿ ಅಧ್ಯಕ್ಷರಾದ ಸುಮಾ ಮಂಜುನಾಥ್ ಇಂಚರ, ಸದಸ್ಯರಾದ ರಾಜೇಂದ್ರ, ಭಾವಿಮನೆ ರಾಜಣ್ಣ, ಸಾವಿತ್ರಮ್ಮ ವಿಜೇಂದ್ರಪ್ಪ, ಉಷಾ ಗಿರೀಶ್, ಕಾಂಗ್ರೆಸ್ ಮುಖಂಡರಾದ ಬಿ. ಸಿದ್ದಪ್ಪ, ಎಚ್.ಬಿ. ಶಿವಯೋಗಿ, ಎಚ್.ಎ. ಉಮಾಪತಿ, ಪ್ರಶಾಂತ್ ಬಣ್ಣಜ್ಜಿ, ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಸಣ್ಣಕ್ಕಿ ಬಸವನಗೌಡ, ಆರ್. ನಾಗಪ್ಪ, ಎಚ್.ಎ. ಗದ್ದಿಗೇಶ್, ಕಂದಾಯಾಧಿಕಾರಿ ವಸಂತ್ ಇತರರು ಉಪಸ್ಥಿತರಿದ್ದರು.