ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಅನುಷ್ಟಾನ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮಾತನಾಡಿದರು. ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಇದ್ದಾರೆ.  
ಜಿಲ್ಲೆ

ಗೃಹಲಕ್ಷ್ಮೀ ಯೋಜನೆಗೆ 30ರಂದು ಚಾಲನೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿಕೆ

ಬಳ್ಳಾರಿ : ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಮಹಾತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯು ಆ.30ರಂದು ರಾಜ್ಯ ಮಟ್ಟದ ಚಾಲನೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಲಿದೆ ಎಂದು ಯುವ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಅನುಷ್ಟಾನ ಕುರಿತು ಅವರು ಮಾತನಾಡಿದರು.

ಮಹಾನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್‌ನ ವಾರ್ಡ್ ಮಟ್ಟದಲ್ಲಿ ಹಾಗೂ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಇಡಿ ಅಥವಾ ಪ್ರೊಜೆಕ್ಟರ್ ಪರದೆಯ ಮೂಲಕ ಮಹಿಳೆಯರು ವೀಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮನೆಯ ಯಜಮಾನಿಯು ಕಾರ್ಯಕ್ರಮದ ದಿನದಂದು ಅವರ ಮನೆಯ ಮುಂದೆ ರಂಗೋಲಿ ಹಾಕಬೇಕು. ಮನೆಯ ಮುಂದೆ ರಂಗೋಲಿಯಲ್ಲಿ ‘ನಾನು ಗೃಹಲಕ್ಷ್ಮೀ, ಮನೆಯ ಯಜಮಾನಿ’ ಎಂದು ಬರೆಯುವಂತೆ ಮನವಿ ಮಾಡಿದ ಸಚಿವರು, ಒಟ್ಟಾರೆಯಾಗಿ ಗ್ರಾಮಗಳಲ್ಲಿ ಹಬ್ಬದ ವಾತವರಣ ಮೂಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯಡಿ 3,01,180 ಫಲಾನುಭವಿಗಳ ಪೈಕಿ 2,59,161 (ಶೇ.86.05) ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, 42,019 ಅರ್ಜಿ ಸಲ್ಲಿಸಬೇಕಿದೆ. ನೋಂದಣಿಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಐದನೇ ಸ್ಥಾನದಲ್ಲಿದೆ. ಕೂಡಲೇ ಅರ್ಹರು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.