ಜಿಲ್ಲೆ

ಗೃಹಲಕ್ಷ್ಮಿ ಯೋಜನೆ ಲೋಕಸಭೆ ಚುನಾವಣೆಯ ರಿಹರ್ಸಲ್ ಅಲ್ಲ : ಡಿ.ಕೆ. ಶಿವಕುಮಾರ್

ಮೈಸೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು ಕಂದಾಯ ಸಚಿವ ಕೃಷ್ಣಭೈರೇಗೌಡ, ಕೃಷಿ ಸಚಿವ ಚಲುವರಾಯ ಸ್ವಾಮಿ ಸಭೆ ನಡೆಸಿದ್ದು, ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಅವರು ಬಿಡುಗಡೆ ಮಾಡುತ್ತಾರೆ. ರಾಜ್ಯದಲ್ಲಿ ಬರಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬರಗಾಲದ ಪರಿಸ್ಥಿತಿಯಲ್ಲೂ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಬೃಹತ್ ಕಾರ್ಯಕ್ರಮದ ಅವಶ್ಯಕತೆಯನ್ನು ಡಿ.ಕೆ. ಶಿವಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು. ‘ಪ್ರತಿಯೊಂದು ಮನೆಗೂ 2 ಸಾವಿರ ರೂ.ಗಳನ್ನು ತಲುಪಿಸುವ ಮಹತ್ವದ ಯೋಜನೆ ಇದಾಗಿದ್ದು, ಇದರಿಂದ ಎಲ್ಲ ಕುಟುಂಬಗಳಿಗೂ ಅನುಕೂಲವಾಗಲಿದೆ. ‘ಇದು ಲೋಕಸಭೆ ಚುನಾವಣೆ ನಡೆಸುತ್ತಿರುವ ರಿಹರ್ಸಲ್ ಅಲ್ಲ, ಸರ್ಕಾರದ ಪಂಚ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಮಳೆಯ ಕೊರತೆಯಿಂದ ಶೇ.40 ರಷ್ಟು ನೀರಿನ ಕೊರತೆ ಇದ್ದು, ನೀರಿನ ಪರಿಸ್ಥಿತಿ ಹೇಗಿದೆ ಎಂಬ ಅರಿವು ನಮಗೆ ಇದೆ. ನಾವು ನ್ಯಾಯಾಲಯಕ್ಕೂ ಗೌರವ ಕೊಡಬೇಕು, ಅದೇ ರೀತಿ ನಮ್ಮ ರೈತರ ಹಿತವನ್ನೂ ಕಾಪಾಡುತ್ತೇವೆ ಎಂದರು.