ಜಿಲ್ಲೆ

ಗೃಹಲಕ್ಷ್ಮೀ ಯೋಜನೆಗೆ 30ರಂದು ಚಾಲನೆ- ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಲ್ಲಿ 54105 ಫಲಾನುಭವಿಗಳ ನೋಂದಣಿ

ಹಿರೇಕೆರೂರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಆ. 30ರಂದು ರಾಜ್ಯಾದ್ಯಂತ ಜಾರಿಯಾಗಲಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ಯು.ಬಿ. ಬಣಕಾರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಆ. 30ರಂದು ಮೈಸೂರಿನಲ್ಲಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ತಾಲೂಕಿನ ಫಲಾನುಭವಿಗಳಿಗೆ ಅಂದು ಈ ಯೋಜನೆ ತಲುಪಲು ಬೇಕಾದ ಸಿದ್ಧತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು. ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಹಿರೇಕೆರೂರ ತಾಲೂಕಿನಲ್ಲಿ ಈಗಾಗಲೇ 26837 ಹಾಗೂ ರಟ್ಟಿಹಳ್ಳಿ ತಾಲೂಕಿನಲ್ಲಿ 27268 ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಇನ್ನು 13000 ಫಲಾನುಭವಿಗಳು ವಿವಿಧ ತಾಂತ್ರಿಕ ತೊಂದರೆಗಳಿಂದ ನೋಂದಣಿ ಮಾಡಿಲ್ಲ. ಶೀಘ್ರದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಹಿರೇಕೆರೂರ ಪಟ್ಟಣದ ಸರ್ವಜ್ಞ ಭವನ, ರಟ್ಟಿಹಳ್ಳಿ ಪಟ್ಟಣದ ಶಾದಿ ಮಹಲ್​ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್​ರಾದ ಡಾ.ಎಚ್. ಪ್ರಭಾಕರಗೌಡ, ಕೆ. ಗುರುಬಸವರಾಜ, ಪ.ಪಂ. ಮುಖ್ಯಾಧಿಕಾರಿ ಪಂಪಾಪತಿ ನಾಯಕ, ಸಂತೋಷ ಚಂದ್ರಿಕೇರ. ತಾಪಂ ಇಒ ಎಚ್. ಶಶಿಧರ, ಎನ್.ಶ್ರೀಧರ, ಸಿಡಿಪಿಒ ಜಯಶ್ರೀ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ವಿ. ಮಂಜುನಾಥ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ತಾಪಂ ಮಾಜಿ ಅಧ್ಯಕ್ಷ ಮಹೇಶ ಗುಬ್ಬಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.