ಜಿಲ್ಲೆ

ಶೀಘ್ರದಲ್ಲಿ ಗೃಹ ಲಕ್ಷ್ಮೀ ಆ್ಯಪ್ ಬಿಡುಗಡೆ

ಬೆಳಗಾವಿ: ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಕ್ಷಿಪ್ರ ಪ್ರಯೋಜನ ದೊರೆಕಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಗೃಹ ಲಕ್ಷ್ಮೀ ಅಪ್ಲಿಕೇಷನ್ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
 ತಾಲೂಕಿನ ಬಸ್ತವಾಡದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಸಾಫ್ಟ್‌ವೇರ್ ಅನ್ನೂ ಸಿದ್ಧಪಡಿಸಲಾಗುತ್ತಿದೆ. ಫಲಾನುಭವಿಗಳಿಗೆ ನೆರವಾಗಲು ಪ್ರತಿ ಬೂತ್‌ನಲ್ಲಿ ನಾಲ್ಕು ಜನ ನೇಮಕ ಮಾಡುತ್ತಿದ್ದೇವೆ. 1.13 ಕೋಟಿ ಕುಟುಂಬಗಳು ಇದರ ಉಪಯೋಗ ಪಡೆಯಲಿವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
 ಹೊಸ ಸಾಫ್ಟ್‌ವೇರ್ ಬಿಡುಗಡೆ ಮಾಡಿದಾಗ ಗೊಂದಲ ಉಂಟಾಗಬಾರದು ಎಂಬ ಒಂದೇ ಕಾರಣಕ್ಕೆ ಸಾಫ್ಟ್‌ವೇರ್ ಸಿದ್ಧಪಡಿಸುವ ಕಾರ್ಯವನ್ನು ಬಹಳಷ್ಟು ಸೂಕ್ಷ್ಮವಾಗಿ ನಿರ್ವಹಿಸಲಾಗುತ್ತಿದೆ. ಶೀಘ್ರವಾಗಿ ಲಾಂಚ್ ಮಾಡುವ ಕೆಲಸವೂ ಜಾರಿಯಿದೆ. ಗೃಹ ಲಕ್ಷ್ಮೀ ಯೋಜನೆ ಆರಂಭವಾದ ನಂತರ ಗೊಂದಲಕ್ಕೆ ಅವಕಾಶವಾಗಬಾರದೆನ್ನುವ ಕಾರಣಕ್ಕೆ ಎಲ್ಲವನ್ನೂ ಸರಿಪಡಿಸಲಾಗುತ್ತಿದೆ. ಹಾಗಾಗಿ ಅರ್ಜಿ ಸ್ವೀಕಾರ ಸ್ವಲ್ಪ ವಿಳಂಬವಾಗುತ್ತಿದೆ. ಯೋಜನೆ ಜಾರಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರು.
 ಗೃಹಜ್ಯೋತಿ ಯೋಜನೆಗೆ ಇಂದಿನಿಂದಲೇ ಅರ್ಜಿ ಆಹ್ವಾನಿಸಿದ್ದೇವೆ. ಈಗಾಗಲೇ ಜಾಹೀರಾತು ಹಾಗೂ ಪತ್ರಿಕಾಗೋಷ್ಠಿ ಮೂಲಕ ಜನರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ಮಹಿಳೆಯರು ಬರೀ ಮನೆ ಕೆಲಸಕ್ಕೆ, ಮಕ್ಕಳ ಹೆರುವುದಕ್ಕೆ ಮಾತ್ರ ಸೀಮಿತವಾಗಬಾರದು. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಮಹಿಳೆಯರು ನೆಮ್ಮದಿಯಿಂದ ಜೀವನ ಮಾಡಬೇಕೆಂಬುದು ಸರ್ಕಾರದ ಉದ್ದೇಶ. ಉಚಿತ ಬಸ್ ಸೌಲಭ್ಯ ಬಳಸಿ ಎಲ್ಲ ಮಹಿಳೆಯರು ದೇವಸ್ಥಾನಕ್ಕೆ ಹೋಗಿ ಪುನೀತರಾಗಲಿ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿ ಎಂದು ನಾನೂ ಪ್ರಾರ್ಥಿಸುತ್ತೇನೆ ಎಂದರು.
 ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ಇದು ಕೇವಲ ರಾಜಕಾರಣವಲ್ಲದೆ ಬೇರೇನೂ ಅಲ್ಲ. ಎಫ್‌ಸಿಐನವರು ಮೊದಲು ಅಕ್ಕಿ ಕೊಡುವುದಾಗಿ ಹೇಳಿ ಈಗ ವಾಪಸ್ ಪಡೆದಿದ್ದಾರೆ. ರಾಜ್ಯದ ಜನರು ವಿಚಾರ ಮಾಡಬೇಕಾಗಿಲ್ಲ. ನಾವು ಏನು ಭರವಸೆ ಕೊಟ್ಟಿದ್ದೇವೋ ಅದನ್ನು ಈಡೇರಿಸುತ್ತೇವೆ. ಜಾರ್ಖಂಡ್, ತೆಲಂಗಾಣ, ಪಂಜಾಬ್ ರಾಜ್ಯ ಸರ್ಕಾರಗಳ ಜತೆ ಚರ್ಚೆ ನಡೆದಿದೆ. ಹೆಚ್ಚಿನ ಮಾಹಿತಿ ಆಹಾರ ಸಚಿವರು ನೀಡಲಿದ್ದಾರೆ ಎಂದರು.