ಜಿಲ್ಲೆ

ಗೃಹ ಜ್ಯೋತಿ ಯೋಜನೆಗೆ ಸಚಿವರಿಂದ ಚಾಲನೆ

ಮಡಿಕೇರಿ: ಪ್ರತಿ ಬಡ ಕುಟುಂಬವೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು. ಜತೆಗೆ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.


ಇಂಧನ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಉಚಿತ ಬೆಳಕು, ಸುಸ್ಥಿರ ಬದುಕು ಕಾರ್ಯಕ್ರಮದಡಿ ಶೂನ್ಯ ವಿದ್ಯುತ್ ಬಿಲ್ಲು ನೀಡುವ ಮೂಲಕ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.


ರಾಜ್ಯ ಮತ್ತು ರಾಷ್ಟ್ರ ಅಭಿವೃದ್ಧಿ ಹೊಂದಲು ಎಲ್ಲಾ ಜಾತಿ, ಉಪ ಜಾತಿ, ಧರ್ಮದ ಜನರ ಜೀವನ ಮಟ್ಟ ಸುಧಾರಣೆ ಕಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಬಡ ಜನರ ಕಲ್ಯಾಣಕ್ಕಾಗಿ ಸರ್ಕಾರ ೫ ಗ್ಯಾರಂಟಿ ಯೋಜನೆಗಳಲ್ಲಿ ೪ ಯೋಜನೆಗಳನ್ನು ಈಗಾಗಲೇ ಕಾರ್ಯರೂಪಗೊಳಿಸಿದೆ ಎಂದು ಸಚಿವರು ಹೇಳಿದರು.


ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ೨೦೦ ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ೧.೩೦ ಲಕ್ಷ ಜನ ಹೆಸರು ನೋಂದಾಯಿಸಿದ್ದು, ೨.೯೦ ಕೋಟಿ ರೂ ವನ್ನು ಸರ್ಕಾರ ಭರಿಸಿದೆ. ಗೃಹ ಜ್ಯೋತಿ ಜತೆಗೆ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ ಹೀಗೆ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ವಾರ್ಷಿಕ ೬೦ ಸಾವಿರ ಕೋಟಿ ರೂ ಭರಿಸುತ್ತದೆ. ಡಿಸೆಂಬರ್ ವೇಳೆಗೆ ಎಲ್ಲಾ ಯೋಜನೆಗಳು ಜಾರಿಗೊಳ್ಳಲಿವೆ ಎಂದು ಎನ್.ಎಸ್.ಭೋಸರಾಜು ತಿಳಿಸಿದರು.


ಇಂದಿನ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೆರಿದ್ದು, ಸಾಧ್ಯವಾದಷ್ಟು ಬಡ ಜನರಿಗೆ ಉತ್ತಮ ಜೀವನ ನಡೆಸಲು ಗ್ಯಾರಂಟಿ ಯೋಜನೆಗಳು ಸಹಕಾರಿ ಆಗಲಿವೆ ಎಂದು ಸಚಿವರು ನುಡಿದರು.


ಮುಖ್ಯಮಂತ್ರಿರವರ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣರವರು ಮಾತನಾಡಿ, ತಳ ಸಮುದಾಯಗಳ ಜನರನ್ನು ಮೇಲೆತ್ತಲು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೆ ಸರ್ಕಾರಿ ಬಸ್‌ಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಿದ್ದರು. ಶಕ್ತಿ ಯೋಜನೆ ಜಾರಿಗೊಂಡ ನಂತರ ಬಸ್‌ನ ಆಸನಗಳು ಭರ್ತಿಯಾಗಿ ಸಂಚರಿಸುತ್ತಿದ್ದು, ಸರ್ಕಾರಿ ಸಾರಿಗೆ ಸಂಸ್ಥೆ ಮತ್ತಷ್ಟು ಸದೃಢವಾಗುವತ್ತ ಸಾಗಿದೆ ಎಂದು ಎ.ಎಸ್.ಪೊನ್ನಣ್ಣ ಎಂದು ವಿವರಿಸಿದರು.


ಕೇಂದ್ರ ಆಹಾರ ನಿಗಮ ಅಕ್ಕಿ ನೀಡಲಾಗುವುದು ಎಂದು ಹೇಳಿ ನೀಡಲಿಲ್ಲ. ಆದರೂ ಸರ್ಕಾರ ಹಣ ನೀಡಲು ಮುಂದಾಯಿತು. ಆ ನಿಟ್ಟಿನಲ್ಲಿ ಸರ್ಕಾರ ನುಡಿದಂತೆ ನಡೆದಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಸುಧಾರಣೆಗೆ ಸಹಕಾರಿ ಆಗಿದೆ. ಸರ್ಕಾರ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯದಂತೆ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಪತ್ತನ್ನು ಕ್ರೋಡಿಕರಿಸಿ ಎಲ್ಲರಿಗೂ ಹಂಚುತ್ತಿದೆ. ಇಂದಿನ ಆಧುನಿಕ ವೇಗದ ಬದುಕಿನಲ್ಲಿ ಜಾತಿ, ಮತ, ಪಂಥ, ಧರ್ಮ ಎಂಬುದು ಅಪ್ರಸ್ತುತ ಎಂದರೆ ಅತಿಶಯೋಕ್ತಿಯಲ್ಲ ಎಂದು ಎ.ಎಸ್.ಪೊನ್ನಣ್ಣವರು ಅಭಿಪ್ರಾಯ ವ್ಯಕ್ತಪಡಿಸಿದರು.


ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಗೃಹ ಜ್ಯೋತಿ ಯೋಜನೆಯಡಿ ೧.೬೮ ಲಕ್ಷ ಕುಟುಂಬಗಳ ಗುರಿಯಲ್ಲಿ, ೧.೨೯ ಲಕ್ಷ ಕುಟುಂಬಗಳು ಮಾತ್ರ ಹೆಸರು ನೋಂದಾಯಿಸಿದೆ. ಬಾಕಿ ಕುಟುಂಬಗಳ ಹೆಸರು ನೋಂದಣಿಗೆ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಮಾಡಿದರು.


ಬಡ ಜನರನ್ನು ಮೇಲೇತ್ತುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಬಡವರ ಪರ ಇದೆ. ಗೃಹ ಜ್ಯೋತಿ ಕಾರ್ಯಕ್ರಮದಿಂದ ಯಾವುದೇ ರೀತಿಯ ದುರುಪಯೋಗ ಇಲ್ಲ. ೨೦೦ ಯುನಿಟ್ ಮೀರಿದ್ದಲ್ಲಿ ವಿದ್ಯುತ್ ಬಿಲ್ಲು ಪಾವತಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕೊಡಗು ಸೆಸ್ಕ್ ವಿಭಾಗದಿಂದ ೩೦ ಕ್ಕೂ ಹೆಚ್ಚು ಸಿಬ್ಬಂದಿ ವರ್ಗಾವಣೆಗೆ ಶಿಫಾರಸು ಆಗಿದ್ದು, ಈ ಪ್ರಕ್ರಿಯೆಯನ್ನು ತಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಶಾಸಕರು ಮನವಿ ಮಾಡಿದರು.


ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಉಚಿತವಾಗಿ ಪಡೆಯುವ ಸೌಲಭ್ಯಗಳನ್ನು ಸರಿಯಾಗಿ ಬಳಸಬೇಕು. ಬೇಕಾಬಿಟ್ಟಿಯಾಗಿ ಬಳಸಿದರೆ, ತಮಗೆ(ಸಾರ್ವಜನಿಕರಿಗೆ) ಹೊರೆ ಎಂಬುದನ್ನು ಮರೆಯಬಾರದು. ಉಚಿತ ಯೋಜನೆ ನೀಡುತ್ತಿರುವುದು ಸಹ ಸಾರ್ವಜನಿಕರ ತೆರಿಗೆ ಹಣ ಎಂಬುದನ್ನು ಮರೆಯಬಾರದು, ಉಚಿತ ಯೋಜನೆಗಳಿಗೆ ಕೆಲವು ನಿರ್ಬಂಧ ಹೇರಬೇಕು. ಎಲ್ಲರೂ ಒಟ್ಟುಗೂಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಅಧೀಕ್ಷಕ ಎಂಜಿನಿಯರ್ ಎಂ.ಕೆ.ಸೋಮಶೇಖರ್, ಸೆಸ್ಕ್ ಇಇ ಅನಿತ ಬಾಯಿ, ಡೀನಾ ಪರ್ಲಕೋಟಿ ಇತರರು ಇದ್ದರು.