ಗೋಕರ್ಣ: ಇಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀ ಹರಿಹರೇಶ್ವರ ವೇದವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಉದಯ ಮಯ್ಯರ್ ಮತ್ತು ವೈದಿಕರಿಂದ ಯಜ್ಞೋಪವೀತ ಅಥವಾ ಜನಿವಾರಗಳನ್ನು ಧರಿಸುವ ಮುನ್ನ ವೇದೋಕ್ತ ಅಭಿಮಂತ್ರಣ ಪ್ರಕ್ರಿಯೆ ವಿಧ್ಯುಕ್ತವಾಗಿ ನಡೆಯಿತು. ಇದೇ ಮೊದಲ ಬಾರಿಗೆ ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ವರ್ಷ ರಕ್ಷಾ ಬಂಧನದಂದು ಕಟ್ಟುವ ರಾಖಿಗಳನ್ನು ಅಭಿಮಂತ್ರಣ ಮೂಲಕ ಶುದ್ಧೀಕರಣ ಮಾಡಲಾಯಿತು.
ಶತಮಾನದ ಸಂಭ್ರಮ: ರಾಷ್ಟ್ರೀಯ ಸ್ವಯಂ ಸೇವಕ ಸಂಘ 2025ಕ್ಕೆ ಶತಮಾನದ ಸಂಭ್ರಮ ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಬರುವ ವರ್ಷದಿಂದ ಶತಮಾನದ ವಿವಿಧ ಕಾರ್ಯಕ್ರಮ ದೇಶಾದ್ಯಂತ ನಡೆಯಲಿವೆ. ಶತಮಾನ ಸಮಾರಂಭಕ್ಕೆ ಪೂರ್ವಭಾವಿಯಾಗಿ ಗೋಕರ್ಣದ ಆರ್ಎಸ್ಎಸ್ ಕೇಂದ್ರ ಶಾಖೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಭಿಮಂತ್ರಣದಿಂದ ಪಾವನವಾಗಿಸಿದ 10 ಸಾವಿರ ರಾಖಿಗಳನ್ನು ಗೋಕರ್ಣ ತಾಲೂಕಿನಾದ್ಯಂತ ವಿತರಿಸಲಾಗುವುದು.
ರಾಸ್ವಸೇ ಸಂಘದ ತಾಲೂಕು: ಗೋಕರ್ಣವನ್ನು ತಾಲೂಕಾಗಿಸಬೇಕು ಎಂಬ ಒತ್ತಾಯ ಅನೇಕ ದಶಕಗಳಿಂದ ಕೇಳಿ ಬರುತ್ತಿದೆ. ಆರೆ, ಯಾವ ಸರ್ಕಾರವೂ ಈ ಬಗ್ಗೆ ಪ್ರಯತ್ನಿಸಿಲ್ಲ. ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸರ್ಕಾರದ ಆದೇಶಕ್ಕೆ ಕಾಯದೆ 2019ರಲ್ಲಿ ಗೋಕರ್ಣವನ್ನು ಕೇಂದ್ರವಾಗಿಸಿ ಹೊಸ ತಾಲೂಕನ್ನು ಗುರುತಿಸಿ ಅದರ ಪ್ರಕಾರವೇ ತನ್ನ ಕಾರ್ಯಕ್ರಮ ಸಂಘಟಿಸುತ್ತಿದೆ ಎಂದು ಎಂದು ಆರ್ಎಸ್ಎಸ್ ಸ್ಥಳೀಯ ಕೇಂದ್ರ ಶಾಖಾ ನಿರ್ವಾಹಕರು ತಿಳಿಸಿದ್ದಾರೆ.