ಜಿಲ್ಲೆ

ವಿದ್ಯಾರ್ಥಿಗಳು ಪರಿಸರದ ಕಾಳಜಿ ವಹಿಸಲಿ: ಮಧುರ ಮಂಡ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ತ್ಯಾಗರಾಜು ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಜತೆಗೆ ತಮ್ಮ ಮನೆಗಳಲ್ಲೂ ಕೂಡ ಪರಿಸರವನ್ನು ಉಳಿಸುವುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಮಧುರ ಮಂಡ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ತ್ಯಾಗರಾಜು ಸಲಹೆ ನೀಡಿದರು.

ತಾಲೂಕಿನ ಹಲ್ಲೆಗೆರೆ ಗ್ರಾಮದ ಚೆನ್ನಕೇಶವ ಪ್ರೌಢಶಾಲೆ ಆವರಣದಲ್ಲಿ ಮಂಡ್ಯ ಮಧುರ ಲಯನ್ಸ್ ಸಂಸ್ಥೆ, ಮಂಡ್ಯ ಬಸರಾಳು ಲಯನ್ಸ್ ಸಂಸ್ಥೆ, ಮಂಡ್ಯ ನಾಲ್ವಡಿ ಸಂಸ್ಥೆ, ಮೈಸೂರು ಪ್ಯಾಲೇಸ್ ಸಿಟಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹಸಿರು ಪಯಣ(ಗ್ರೀನ್ ಯಾತ್ರಾ) ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ನಾವು ಸುಂದರವಾಗಿ ಇದ್ದರೆ ಸಾಲದು. ನಮಗೆ ಗಾಳಿ, ಬೆಳಕು ನೀಡುವ ಪರಿಸರವನ್ನು ನಾಶವಾಗದಂತೆ ನೋಡಿಕೊಳ್ಳಬೇಕು. ಮನುಷ್ಯ ಎಷ್ಟು ಸ್ವಾರ್ಥಿ ಎಂದರೆ ಆತನ ದುರ್ಬುದ್ಧಿಯಿಂದಾಗಿ ಪರಿಸರ ನಾಶವಾಗುತ್ತಿದೆ. ಇದೇ ಮುಂದುವರೆಯುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆಗೆ ದೊಡ್ಡ ಕಂಟಕ ಎದುರಾಗುತ್ತದೆ. ನಾನು ಓದಿದ ಶಾಲೆಯಲ್ಲಿ ಇಂತಹದೊಂದು ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿದ್ದು ಅತೀವ ಸಂತೋಷ ತಂದಿದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಎ ಪ್ರಾಂತಪಾಲ ಸುಬ್ರಮಣ್ಯ ಮಾತನಾಡಿ, ಭೂಮಿಯ ಮೇಲೆ ನಾವೆಲ್ಲ ಸುರಕ್ಷವಾಗಿರಬೇಕಾದರೆ ಹಸಿರು ಬೆಳೆಸುವ ಕಾರ್ಯ ಮಾಡಬೇಕು. ನಿತ್ಯ ನಿರಂತರವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿ ಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯತೆ ಎಂದು ಕರೆ ನೀಡಿದರು.

ಲಯನ್ ವಾಣಿ ಸುಬ್ರಮಣ್ಯ, ಜಿಲ್ಲಾ ಸಂಪುಟ ಕಾರ್ಯದರ್ಶಿ ಇ.ಕೃಷ್ಣ, ಜಿಲ್ಲಾಧ್ಯಕ್ಷ ನಾಗೇಶ್‌ಮೂರ್ತಿ, ಹಸಿರು ಯಾತ್ರಾ ಕಾರ್ಯದರ್ಶಿ ಆನಂದ್, ಮಂಡ್ಯ ಮಧುರ ಲಯನ್ಸ್ ಸಂಸ್ಥೆಯ ವಿನಯ್‌ಕುಮಾರ್, ಬಸರಾಳು ಲಯನ್ಸ್ ಸಂಸ್ಥೆಯ ಪ್ರದೀಪ್, ಲಯನ್ ದೇವೇಗೌಡ, ಚೆನ್ನಕೇಶವ ಪ್ರೌಢಶಾಲೆ ಕಾರ್ಯದರ್ಶಿ ಸಿದ್ದೇಗೌಡ, ವಲಯಾಧ್ಯಕ್ಷ ಕೆಂಪರಾಜು, ಹಿರಿಯ ವಿದ್ಯಾರ್ಥಿಗಳಾದ ಸತೀಶ್‌ಕುಮಾರ್, ಪಾಪಣ್ಣ ಸೇರಿದಂತೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವರ್ಗದವರು ಭಾಗವಹಿಸಿದ್ದರು. ಇದೇ ವೇಳೆ ಗ್ರೀನ್ ಯಾತ್ರಾ ಕಾರ್ಯಕ್ರಮದ ಅಂಗವಾಗಿ 60ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ನೆಡಲಾಯಿತು.