ಜಿಲ್ಲೆ

ಸ್ಪರ್ ರಸ್ತೆಗೆ ಗ್ರೀನ್‌ಸಿಗ್ನಲ್! : ಉಜಿರೆ- ಪೆರಿಯಶಾಂತಿ ಮಾರ್ಗ : ಬಹುಕಾಲದ ಬೇಡಿಕೆ ಈಡೇರಿಕೆಗೆ ಸನ್ನಿಹಿತ

ಸೌಮ್ಯ ಆರ್

ಮನೋಹರ್ ಬಳಂಜ ಬೆಳ್ತಂಗಡಿ

ಬಹುಕಾಲದ ಬೇಡಿಕೆಯಾಗಿದ್ದ ಉಜಿರೆ- ಪೆರಿಯಶಾಂತಿ ಸ್ಪರ್ ರಸ್ತೆ ಅಭಿವೃದ್ಧಿಗೆ ಕಾಲ ಸಮೀಪಿಸಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಧರ್ಮಸ್ಥಳ, ಉಡುಪಿ, ಸುಬ್ರಹ್ಮಣ್ಯ, ಸೌತಡ್ಕ ಸೇರಿ ಅನೇಕ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ಸುಮಾರು 30 ಕಿ.ಮೀ. ವ್ಯಾಪ್ತಿಯ ಈ ರಸ್ತೆ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನೂ ಸಂಪರ್ಕಿಸುತ್ತದೆ. ಜತೆಗೆ ಮಂಗಳೂರು, ಬೆಂಗಳೂರು ಸಂಪರ್ಕಕ್ಕೂ ಪ್ರಧಾನ ಕೊಂಡಿ. ರಾಜ್ಯ ಹೆದ್ದಾರಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನಾಲ್ಕು ವರ್ಷಗಳ ಹಿಂದೆ ಹಸ್ತಾಂತರವಾಗಿರುವ ಈ ರಸ್ತೆ ಸ್ಪರ್ ಯೋಜನೆಯಲ್ಲಿ ಅಭಿವೃದ್ಧಿ ಹೊಂದಲಿದೆ. ಪ್ರಸ್ತುತ ರಸ್ತೆ ಅಲ್ಲಲ್ಲಿ ಹಾಳಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಭಿವೃದ್ಧಿಯ ಎಲ್ಲ ಸಮೀಕ್ಷೆಗಳು, ಟೆಂಡರ್ ಪ್ರಕ್ರಿಯೆ ಇನ್ನಿತರ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಅಂತಿಮ ಹಂತದ ಸಮೀಕ್ಷೆಗಳನ್ನು ಪೂರ್ಣಗೊಳಿಸಿ ಕಾಮಗಾರಿಗೆ ಹಸಿರು ನಿಶಾನೆ ತೋರಿದ್ದಾರೆ.

600 ಕೋಟಿ ರೂ. ಅನುದಾನ: ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ 600 ಕೋಟಿ ರೂ.ಗೂ ಅಧಿಕ ಅನುದಾನ ಬಿಡುಗಡೆಗೊಳಿಸಿದ್ದು, ರಸ್ತೆಯು 10 ಮೀ.ಗೂ ಹೆಚ್ಚು ಅಗಲಕ್ಕೆ ವಿಸ್ತರಣೆಗೊಳ್ಳಲಿದೆ. ಕೆಲವೆಡೆ ಸೇತುವೆಗಳೂ ಹಾಗೂ ಚರಂಡಿಗಳು ನಿರ್ಮಾಣಗೊಳ್ಳಲಿದೆ. ಉಜಿರೆಯಿಂದ ಧರ್ಮಸ್ಥಳ ತನಕದ 9 ಕಿ.ಮೀ. ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ, ನಿಡ್ಲೆ, ಕೊಕ್ಕಡ, ಪೆರಿಯಶಾಂತಿ ತನಕ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ.

ಏನಿದು ಸ್ಪರ್ ಯೋಜನೆ?

ಐತಿಹಾಸಿಕ ಕ್ಷೇತ್ರಗಳನ್ನು ಸಂಪರ್ಕಿಸುವ, ರಾಜ್ಯಗಳ ಪರಸ್ಪರ ಸಂಪರ್ಕ, ರಾಷ್ಟ್ರೀಯ ಹೆದ್ದಾರಿಗಳ ಪರಸ್ಪರ ಸಂಪರ್ಕ, ಪ್ರಮುಖ ರಸ್ತೆ ಸಂಪರ್ಕಿಸುವ ಒಳ ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಮಟ್ಟಕ್ಕೆ ಸುಸಜ್ಜಿತವಾಗಿ ನಿರ್ಮಿಸುವ ಯೋಜನೆಯನ್ನು ‘ಸ್ಪರ್ ಯೋಜನೆ’ ಎನ್ನಲಾಗುತ್ತದೆ. ಇತಿಹಾಸ ಪ್ರಸಿದ್ಧ ದೇವಾಲಯಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಈಗಾಗಲೇ ಈ ಯೋಜನೆ ಅನುಷ್ಠಾನಗೊಂಡಿದ್ದು, ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಪ್ರಮುಖವಾಗಿ ಗುರುತಿಸಿ ಯೋಜನೆ ರೂಪಿಸಲಾಗಿದೆ. ಜತೆಗೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73 ಹಾಗೂ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಅನ್ನೂ ಈ ರಸ್ತೆ ಸಂಪರ್ಕಿಸುತ್ತದೆ.

ರಸ್ತೆ ಅಭಿವೃದ್ಧಿಯ ಎಲ್ಲ ಪ್ರಕ್ರಿಯೆಗಳು, ಪರಿಶೀಲನೆ ಪೂರ್ಣಗೊಂಡಿವೆ. ಪ್ರಸ್ತುತ ಮಳೆ ಇಳಿಮುಖವಾಗಿದ್ದು, ಕೆಲವೇ ದಿನಗಳಲ್ಲಿ ಉಜಿರೆ- ಪೆರಿಯಶಾಂತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆಯಲಿದೆ. ಕೆ.ಟಿ.ಚಂದ್ರಶೇಖರ್, ಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ದ.ಕ. ಶೀಘ್ರವೇ ಕಾಮಗಾರಿ ಆರಂಭ 30 ಕಿ.ಮೀ ವ್ಯಾಪ್ತಿಯ ದಾರಿ ಧರ್ಮಸ್ಥಳ, ಕುಕ್ಕೆ ಸೌತಡ್ಕಕ್ಕೂ ಸಂಪರ್ಕ ಚರಂಡಿ, ಸೇತುವೆಗಳೂ ನಿರ್ಮಾಣ https://www.vijayavani.net/education-gem-award https://www.vijayavani.net/state-level-weightlifting-competition