ಜಿಲ್ಲೆ

ಕೊಟ್ಟಿಗೆ, ಹಸಿರೆಲೆ ಗೊಬ್ಬರದಿಂದ ಸಮಗ್ರ ಸುಸ್ಥಿರ ಕೃಷಿ ಸಾಧ್ಯ

ಶಿರಸಿ: ಜನಸಂಖ್ಯೆ ಏರಿಕೆ, ವಾತಾವರಣದ ಬದಲಾವಣೆಯಿಂದ ಮಣ್ಣಿನ ಸವಕಳಿ ಹೆಚ್ಚಾಗಿದ್ದು, ಬೆಳೆಯ ಇಳುವರಿಯಲ್ಲಿ ತೀವ್ರ ಇಳಿಕೆಯಾಗಿದೆ. ರೈತಾಪಿ ಸಮುದಾಯ ಮಣ್ಣಿನ ಫಲವತ್ತತೆ ಹೆಚ್ಚಿಸುವ ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತ ಕೃಷಿ ಅಧಿಕಾರಿ ಎಸ್.ಡಿ. ಬಳಿಗಾರ ಹೇಳಿದರು.

ತಾಲೂಕಿನ ಕೊರ್ಲಕಟ್ಟಾ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮನು ವಿಕಾಸ ಸಂಸ್ಥೆಯಿಂದ ಆಯೋಜಿಸಿದ್ದ ಗ್ರಾಮೀಣ ಮಹಿಳೆಯರಿಗಾಗಿ ಸುಸ್ಥಿರ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತನ್ನ ಮೂಲ ಅಸ್ತಿತ್ವ ಉಳಿಸಿಕೊಂಡು ನಿರಂತರವಾಗಿ ಮಾಡುವ ಕೃಷಿಯನ್ನು ಸುಸ್ಥಿರ ಕೃಷಿ ಎನ್ನಬಹುದು. ಸಾವಯವ ಕೃಷಿ ಅಥವಾ ಸುಸ್ಥಿರ ಕೃಷಿಗೆ ಮುಖ್ಯವಾಗಿ ಪಶುಸಂಗೋಪನೆ ಮರುಸೃಷ್ಟಿಯಾಗಬೇಕು. ಒಂದು ಬೆಳೆ ಚೆನ್ನಾಗಿ ಬೆಳೆಯಲು 16 ರೀತಿಯ ಪೋಷಕಾಂಶಗಳ ಅಗತ್ಯತೆ ಇದೆ. ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ ಬಳಕೆಯಿಂದ ಸಮಗ್ರ ಸುಸ್ಥಿರ ಕೃಷಿ ಸಾಧ್ಯ. ಅಂತರ್ಜಲ ಬಲವರ್ಧನೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದ ಮಾತ್ರ ಮುಂದಿನ ಪೀಳಿಗೆಗೆ ನೆಮ್ಮದಿ ಕಟ್ಟಿಕೊಡಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮನುವಿಕಾಸ ಸಂಸ್ಥೆಯ ಯೋಜನಾ ಉಪನಿರ್ದೇಶಕ ಅಶ್ವತ್ಥ ನಾಯ್ಕ ಮಾತನಾಡಿ, ಸಂಸ್ಥೆಯು ಈಗಾಗಲೇ ಅವಸಾನದ ಅಂಚಿನಲ್ಲಿರುವ 310 ಕೆರೆಗಳ ಪುನರುಜ್ಜೀವನ, 4 ಸಾವಿರಕ್ಕೂ ಹೆಚ್ಚು ಕೃಷಿಹೊಂಡಗಳ ನಿರ್ವಣ, 3ಸಾವಿರಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ರಚಿಸಿದೆ. ಕರ್ನಾಟಕದ 5 ಜಿಲ್ಲೆಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರಲ್ಲದೆ, ಸಂಸ್ಥೆಯು 23 ವರ್ಷಗಳಿಂದ ಗ್ರಾಮೀಣ ಸಮುದಾಯದ ಮಹಿಳೆಯರು ಮತ್ತು ಸಣ್ಣ ರೈತ ಕುಟುಂಬಗಳಿಗೆ ರೂಪಿಸಿರುವ ಕಾರ್ಯಯೋಜನೆಗಳ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾಳಂಜಿ, ಮರಗುಂಡಿ ಕಾಯಿಗುಡ್ಡೆ, ಗೊಣಗಟ್ಟಾ, ಸಂತೊಳ್ಳಿ, ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯಲು ಪಾಲ್ಗೊಂಡು ಸುಸ್ಥಿರ ಕೃಷಿ ಬಗ್ಗೆ ಮಾಹಿತಿ ಪಡೆದರು. ಕೊರ್ಲಕಟ್ಟಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಲಾ ಪರಶುರಾಮ ಚೆನ್ನಯ್ಯ, ಪ್ರಗತಿಮಿತ್ರ ಸೌಹಾರ್ದ ಸಹಕಾರಿ ಸಂಘದ ಅಧಿಕಾರಿ ಮಾರುತಿ ಆರ್., ಮನುವಿಕಾಸದ ಸಿಬ್ಬಂದಿ ಇದ್ದರು.