ಚಿಕ್ಕಬಳ್ಳಾಪುರದ ಸೂಲಾಲಪ್ಪದಿನ್ನೆ ಅರಣ್ಯ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮತ್ತಿತರರು ಇದ್ದರು. 
ಜಿಲ್ಲೆ

ಜೀವಸಂಕುಲದ ಜೀವನಾಡಿ ಹಸಿರು

ಚಿಕ್ಕಬಳ್ಳಾಪುರದ ಸೂಲಾಲಪ್ಪದಿನ್ನೆ ಅರಣ್ಯ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮತ್ತಿತರರು ಇದ್ದರು.


ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಭಿಮತ ಸೂಲಾಲಪ್ಪನ ದಿನ್ನೆಯಲ್ಲಿ ಅರಣ್ಯ ಹುತಾತ್ಮರ ದಿನಾಚರಣೆ

ಚಿಕ್ಕಬಳ್ಳಾಪುರ : ಹಸಿರು ಹೊದಿಕೆ ಜೀವಸಂಕುಲದ ಜೀವನಾಡಿ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯಪಟ್ಟರು.
ತಾಲೂಕಿನ ಸೂಲಾಲಪ್ಪನ ದಿನ್ನೆ ಅರಣ್ಯ ಪ್ರದೇಶದಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.
ಅರಣ್ಯದ ಹಸಿರು ಹೊದಿಕೆ ಮಾನವ ಸೇರಿ ಕೋಟ್ಯಂತರ ಜೀವಿಗಳ ಜೀವನಾಡಿಯಾಗಿದ್ದು, ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಪ್ರತಿ ದೇಶ ತನ್ನ ಒಟ್ಟು ಭೂಭಾಗದ ಪೈಕಿ ಶೇ.33ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರಬೇಕು. ಈ ವಿಷಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದರು.
ಜನಸಂಖ್ಯೆಯ ಹೆಚ್ಚಳ, ಅಭಿವೃದ್ಧಿ ಮತ್ತು ಅಕ್ರಮ ಒತ್ತುವರಿ ಇತರ ಕಾರಣಗಳಿಂದಾಗಿ ಅರಣ್ಯದ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಅರಣ್ಯ ಪ್ರದೇಶದ ಮಾನದಂಡವನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರಿಸಿದರು.
ಉತ್ತಮ ಗಾಳಿ, ಬೆಳಕು, ನೀರು ಸೇರಿ ಅಗತ್ಯ ಜೀವ ಸೌಕರ್ಯಗಳಿಗಾಗಿ, ಸಕಲ ಜೀವರಾಶಿಗಳು ಜೀವಂತವಾಗಿರಲು ಉತ್ತಮ ಪರಿಸರ ಅತ್ಯಗತ್ಯ. ಇದಕ್ಕೆ ಅರಣ್ಯ ಎಂಬ ಹಸಿರು ಹೊದಿಕೆ ನಿಗದಿತ ಪ್ರಮಾಣದಲ್ಲಿ ಇರಬೇಕು ಎಂಬುದನ್ನು ಅರಿಯಬೇಕು. ಕೇವಲ ಸಸಿ ನೆಟ್ಟರೆ ಸಾಲದು, ಅದನ್ನು ಮರವಾಗುವಂತೆ ಪೋಷಿಸದಾಗ ಸಾರ್ಥಕತೆ ಬರುತ್ತದೆ.
ಹಸಿರು ಪ್ರದೇಶವನ್ನು ವಿಸ್ತರಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟು ಹೋಗಬೇಕಾಗಿದೆ. ಅರಣ್ಯ ಸಂರಕ್ಷಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಪಿ.ಎನ್. ರವೀಂದ್ರ ಸಲಹೆ ನೀಡಿದರು. ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸುವ, ಕರ್ತವ್ಯದ ಸಾಲಿನಲ್ಲಿ ಪ್ರಾಣವನ್ನು ಅರ್ಪಿಸಿದವರನ್ನು ಸ್ಮರಿಸಲು
ಹುತಾತ್ಮರ ದಿನ ಸಹಕಾರಿ. ಪ್ರತಿಯೊಬ್ಬರೂ ಕಾಡು ನಾಶದಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕು. ಸಂಘ ಸಂಸ್ಥೆಗಳು ಅರಣ್ಯ ರಕ್ಷಣೆಯ ಚಟುವಟಿಕೆಯನ್ನು ನಿರಂತರವಾಗಿ ಕೈಗೊಂಡು ಪರಿಸರ ಸಮತೋಲನ ಕಾಪಾಡಲು ಶ್ರಮಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಅರಣ್ಯ ಹುತಾತ್ಮರ ದಿನ ಆಚರಣೆ ಬಗ್ಗೆ ಮಾಹಿತಿ ನೀಡಿದರು. 2013ರಲ್ಲಿ ಕೇಂದ್ರ ಪರಿಸರ ಸಚಿವಾಲಯವು ಸೆ.11 ಅನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ. 1730ರಲ್ಲಿ ರಾಜಸ್ಥಾನದ ಮಹಾರಾಜ ಅಭಯ್ಸಿಂಗ್ ಖೇಜಾರ್ಲಿಯ ಬಿಷ್ಣೋಯ್ ಗ್ರಾಮದಲ್ಲಿ ಮರಗಳನ್ನು ಕಡಿಯಲು ಆದೇಶಿಸಿದಕ್ಕೆ ಸ್ಥಳೀಯ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ದಂಗೆಯ ನೇತೃತ್ವವನ್ನು ಅಮೃತಾದೇವಿ ಬಿಷ್ಣೋಯ್ ಎಂಬ ಮಹಿಳೆ ವಹಿಸಿದ್ದರು. ಗ್ರಾಮಸ್ಥರು ಮರಗಳನ್ನು ಕಡಿದು ಒಪ್ಪಿಸಲು ನಿರಾಕರಿಸಿದರು. ಖೇಜ್ರಿ ಮರಗಳು ಬಿಷ್ಣೋಯಿಗಳಿಗೆ ಪವಿತ್ರ ಎಂಬುದಾಗಿ ಹೇಳಿದರು. ಮರಗಳನ್ನು ಕಡಿಯಲು ಅವಕಾಶ ನೀಡುವುದಕ್ಕಿಂತ ಸಾಯುವುದೇ ಮೇಲು ಎಂದು ಅಡ್ಡ ಬಂದಾಗ ಕೋಪಗೊಂಡ ರಾಜ ಅಮೃತಾದೇವಿ ಮತ್ತು ಅವರ ಮೂವರು ಹೆಣ್ಣುಮಕ್ಕಳ ಶಿರಚ್ಛೇದ ಮಾಡಿದ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಬಿಷ್ಣೋಯ್ ಸಮುದಾಯದ ವೃದ್ಧರು, ಯುವಕರು, ಪುರುಷರು ಮತ್ತು ಮಹಿಳೆಯರು ಎಲ್ಲರೂ ಮರಗಳನ್ನು ಅಪ್ಪಿಕೊಳ್ಳಲು ಮತ್ತು ರಕ್ಷಿಸಲು ಒಟ್ಟುಗೂಡಿದ್ದು ಇದರಲ್ಲಿ 363 ಬಿಷ್ಣೋಯಿಗಳು ಕೊಲ್ಲಲ್ಪಟ್ಟರು. ಈ ಘಟನೆಯಿಂದ ರಾಜ ಆಘಾತಕ್ಕೊಳಗಾಗಿ ಸೇನೆಯನ್ನು ಹಿಂಪಡೆದ. ಗ್ರಾಮಸ್ಥರನ್ನು ಭೇಟಿ ಮಾಡಿ ಕ್ಷಮೆಯಾಚಿಸಿದ. ವನ್ಯಜೀವಿಗಳ ಮತ್ತು ಅರಣ್ಯದ ರಕ್ಷಣೆಗಾಗಿ ಪ್ರಾಣವನ್ನೂ ಅರ್ಪಿಸಿದ ಇಂತಹ ವೀರರಿಗೆ ಗೌರವ ಸಲ್ಲಿಸಲು ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಕಾಡುಗಳು ಮತ್ತು ಪರಿಸರವನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಹುತಾತ್ಮರಿಗೆ ನಮನ
ಜಿಲ್ಲಾಧಿಕಾರಿ ರವೀಂದ್ರ, ಎಸ್‌ಪಿ ಕುಶಾಲ್ ಚೌಕ್ಸೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್. ಮಂಜುನಾಥ್ ಅರಣ್ಯ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಈ ವೇಳೆ ಹುತಾತ್ಮರ ಬಲಿದಾನವನ್ನು ಸ್ಮರಿಸಲಾಯಿತು.
ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಚಿನ್ನಪ್ಪಯ್ಯ, ವಲಯ ಅರಣ್ಯ ಅಧಿಕಾರಿ ವಾಸುದೇವ ಮೂರ್ತಿ, ಸಾಮಾಜಿಕ ಅರಣ್ಯ ವಿಭಾಗದ ಎಂ.ಸಿ ಗೀತಾ, ಗಸ್ತು ಅರಣ್ಯ ಪಾಲಕ ರಾಮಪ್ಪ, ಕ್ಷೇಮಾಭಿವೃದ್ಧಿ ಅರಣ್ಯ ನೌಕರರ ಸಂಘ ಸುಬ್ಬಾರೆಡ್ಡಿ ಮತ್ತಿತರರು ಇದ್ದರು.