ಜಿಲ್ಲೆ

ಇ-ತ್ಯಾಜ್ಯ ಸಂಗ್ರಹಕ್ಕೆ ಹಸಿರು ಕ್ರಿಯಾಸೇನೆ ಸಜ್ಜು: ಮೂರು ನಗರಸಭೆಗಳಲ್ಲಿ ಪ್ರಕ್ರಿಯೆ ಆರಂಭ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಹಾಳಾದ ಇಲೆಕ್ಟ್ರಾನಿಕ್ ಉಪಕರಣಗಳನ್ನೊಳಗೊಂಡ ಇ-ತ್ಯಾಜ್ಯವನ್ನು ಮನೆಗೆ ತೆರಳಿ ಹಸಿರು ಕ್ರಿಯಾ ಸೇನೆ ಸದಸ್ಯರು ಸಂಗ್ರಹಿಸಲಿದ್ದಾರೆ. ಮನೆ, ಸಂಸ್ಥೆಗಳಿಂದ ಸೂಕ್ತ ಬೆಲೆ ತೆತ್ತು ತ್ಯಾಜ್ಯ ಸಂಗ್ರಹಿಸಲು ಹಸಿರು ಕ್ರಿಯಾ ಸೇನೆ ಸಿದ್ಧತೆ ನಡೆಸುತ್ತಿದೆ. ಪ್ರತಿಯೊಂದು ಇ-ತ್ಯಾಜ್ಯದ ವಸ್ತುವಿನ ಖರೀದಿ ಬೆಲೆ ಪ್ರತ್ಯೇಕವಾಗಿರಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಇಲಾಖೆ ನೇತೃತ್ವದಲ್ಲಿ ತ್ಯಾಜ್ಯ ಸಂಗ್ರಹಣೆಗೆ ಸಿದ್ಧತೆ ಆರಂಭಗೊಂಡಿದೆ.

ಮೊದಲ ಹಂತದಲ್ಲಿ ಜಿಲ್ಲೆಯ ನೀಲೇಶ್ವರ, ಕಾಞಂಗಾಡು, ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿರುವ ಮನೆ ಮತ್ತು ಸಂಸ್ಥೆಗಳನ್ನು ಒಳಪಡಿಸಲಾಗುವುದು. ಜುಲೈ 15ರಂದು ಆರಂಭಗೊಂಡ ಅಭಿಯಾನ 31ರವರೆಗೆ ನಡೆಯಲಿದೆ. ಇದಕ್ಕೂ ಮೊದಲು ನಗರಸಭೆ ಅಧಿಕಾರಿಗಳ ಸಭೆ ನಡೆಯಿತು. ಕ್ಲೀನ್ ಕೇರಳ ಕಂಪನಿಯಿಂದ ಹಸಿರು ಕ್ರಿಯಾ ಸೇನೆಗೆ ತರಬೇತಿ ನೀಡಲಾಯಿತು. ಮರುಬಳಕೆ ಮಾಡಬಹುದಾದ ವಸ್ತು, ಅಪಾಯಕಾರಿ ವಸ್ತು, ಸಂಗ್ರಹಣೆ, ಸಾಗಣೆ ಸಮಯದಲ್ಲಿ ಅನುಸರಿಸಬೇಕಾದ ಸುರಕ್ಷತಾ ಮಾನದಂಡ. ಇ-ತ್ಯಾಜ್ಯದ ಬೆಲೆ, ಪರಿಣಾಮಗಳ ಕುರಿತು ತರಬೇತಿ ನೀಡಲಾಯಿತು.

ನಗರದ ನೆಲ್ಲಿಕುಂಜೆಯಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ ಉದ್ಘಾಟಿಸಿದರು. ಕಾಞಂಗಾಡ್ ನಗರಸಭಾ ಮಟ್ಟದ ಉದ್ಘಾಟನೆಯನ್ನು ಆಲಾಮಿಪಳ್ಳಿಯಲ್ಲಿ ನಗರಸಭಾಧ್ಯಕ್ಷೆ ಕೆ.ವಿ.ಸುಜಾತಾ ನೆರವೇರಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು, ಕ್ಲೀನ್ ಸಿಟಿ ವ್ಯವಸ್ಥಾಪಕರು, ವಾರ್ಡ್ ಸದಸ್ಯರು, ಕ್ಲೀನ್ ಕೇರಳ ಕಂಪನಿಯ ಜಿಲ್ಲಾ ವ್ಯವಸ್ಥಾಪಕರು, ವಲಯ ಸಂಯೋಜಕರು, ಹಸಿರು ಕ್ರಿಯಾ ಸೇನೆ ಸದಸ್ಯರು ಭಾಗವಹಿಸಿದ್ದರು.

210 ಟನ್ ಅಪಾಯಕಾರಿ ತ್ಯಾಜ್ಯ

ಹಸಿರು ಕ್ರಿಯಾ ಸೇನೆ ಸಂಗ್ರಹಿಸುವ ತ್ಯಾಜ್ಯವನ್ನು ಕ್ಲೀನ್ ಕೇರಳ ಕಂಪನಿಗೆ ನೀಡಲಾಗುವುದು. ಕಳೆದ ಹಣಕಾಸು ವರ್ಷದಲ್ಲಿ ಕ್ಲೀನ್ ಕೇರಳ 59 ಟನ್ ಮರುಬಳಕೆಯ ತ್ಯಾಜ್ಯ, 210 ಟನ್ ಅಪಾಯಕಾರಿ ತ್ಯಾಜ್ಯ ಸಂಗ್ರಹಿಸಿದೆ.