ಕುಶಾಲನಗರ : ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ ಸಿಗುವಂತೆ ಮಾಡಲು ವರಿಷ್ಠರು ಹಾಗೂ ನಾಯಕರಿಗೆ ಶಿಫಾರಸು ಮಾಡಲಾಗುತ್ತದೆ ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಒಟ್ಟಾಗಿ ದುಡಿದು ಪಕ್ಷವನ್ನು ಅಧಿಕಾರ ತರಲು ಶ್ರಮಿಸಬೇಕು. ಗೆಲ್ಲುವ ಮಾನದಂಡ ಅನುಸರಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ತಂತ್ರಗಳನ್ನು ರೂಪಿಸಲು ಕಿವಿಮಾತು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಮಾತನಾಡಿ, 25 ವರ್ಷದಿಂದ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಈಗ ಕಾಂಗ್ರೆಸ್ ನ ಭದ್ರಕೋಟೆ ಮಾಡುವಲ್ಲಿ ನಾಯಕರೊಂದಿಗೆ ಕಾರ್ಯಕರ್ತರು ಕೈ ಜೋಡಿಸಬೇಕು. ಜಿಲ್ಲೆಯ ಪ್ರಜ್ಞಾವಂತ ಮತದಾರರು ವಿದ್ಯಾವಂತರನ್ನು ಆಯ್ಕೆ ಮಾಡುವ ಮೂಲಕ ಪ್ರಬುದ್ಧತೆ ಹೊಂದಿರುವುದನ್ನು ರುಜುವಾತು ಮಾಡಿದ್ದಾರೆ. ಶಾಸಕ ಮಂತರ್‌ಗೌಡ ಅವರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಪಕ್ಷಕ್ಕೆ ಮತ್ತಷ್ಟು ಶಕ್ತಿ ಮತ್ತು ಚೈತನ್ಯ ಬಂದಿದೆ. ಜಿಲ್ಲೆಯ ಕಾರ್ಯಕರ್ತರ ಮತ್ತು ನಾಯಕರ ಅಭಿಪ್ರಾಯವನ್ನು ಕೆಪಿಸಿಸಿ ನಾಯಕರಿಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಕೆ.ಕೆ.ಮಂಜುನಾಥ್ ಕುಮಾರ್, ಜಿಪಂ ಮಾಜಿ ಸದಸ್ಯೆ ಸುನೀತಾ, ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆ.ಪಿ.ಸಿ.ಸಿ ಸದಸ್ಯರಾದ ಮಂಜುನಾಥ್ ಗುಂಡರಾವ್, ಕೆ.ಪಿ.ಚಂದ್ರಕಲಾ, ನಟೇಶ್ ಗೌಡ, ಪ್ರಮುಖರಾದ ಹಮೀದ್, ಅಣ್ಣಯ್ಯ, ಮತ್ತಿತರರು ಹಾಜರಿದ್ದರು.