ಜಿಲ್ಲೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ: ಅನುರಾಧ ಪ್ರಕಾಶ್

ಮಡಿಕೇರಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ಇದ್ದು ಇಂಥ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಯೋಜನಾ ನಿರ್ದೇಶಕಿ ಅನುರಾಧ ಎಸ್.ಪ್ರಕಾಶ್ ತಿಳಿಸಿದರು.


ನಗರದ ಕ್ರಿಸ್ಟಲ್ ಕೋರ್ಟ್‌ನಲ್ಲಿ ಇನ್ನರ್ ವೀಲ್ ಜಿಲ್ಲೆ ೩೧೮ನ ೫೪ನೇ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಬಾಲಕಿಯರಿಗೆ ೧೦೦ ಸೈಕಲ್ ವಿತರಿಸುವ ಯೋಜನೆ ಅನ್ವಯ, ವಿದ್ಯಾರ್ಥಿನಿಯರಿಗೆ ೫ ಸೈಕಲ್‌ಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.


ಮುಂದಿನ ತಿಂಗಳಿನಲ್ಲಿ ಆದಿತ್ಯ ೩ರ ಉಡಾವಣೆಯಾಗುವ ಸಾಧ್ಯತೆಯಿದ್ದು, ಯಶಸ್ವಿ ಉಡಾವಣೆಗಾಗಿ ಸರ್ವ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ಪ್ರಸ್ತುತ, ಇಸ್ರೋ ಸಂಸ್ಥೆಯಲ್ಲಿ ಶೇ.೭೨ ರಷ್ಟು ಪುರುಷರಿದ್ದು ಶೇ.೨೮ ರಷ್ಟು ಮಹಿಳೆಯರಿದ್ದಾರೆ. ಈ ಲೆಕ್ಕ ಸಮಾನ ಪ್ರಮಾಣಕ್ಕೆ ಬರಬೇಕಾದರೆ ಮಹಿಳೆಯರೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಈ ರಂಗಕ್ಕೆ ಪದಾರ್ಪಣೆ ಮಾಡಬೇಕೆಂದು ಹೇಳಿದರು.


ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಲೆಕ್ಕಾಚಾರದ ಸವಾಲುಗಳಿದೆ. ತಂಡದ ಸ್ಪೂರ್ತಿಯಿದ್ದು, ಹೊಸ ಚಿಂತನೆಗಳಿಗೆ ಸಾಕಷ್ಟು ಅವಕಾಶಗಳಿದೆ. ಭೂಮಿಯಲ್ಲಿಯೇ ಅನೇಕ ಪ್ರಯೋಗಗಳನ್ನು ಮಾಡಿದ ಬಳಿಕವೇ ಗಗನಕ್ಕೆ ರಾಕೆಟ್ ಗಳನ್ನು ಉಡಾಯಿಸಲಾಗುತ್ತದೆ. ಒಮ್ಮೆ ಗಗನಕ್ಕೆ ಚಿಮ್ಮಿದ ಬಳಿಕ ಯಾವುದೇ ಸಮಸ್ಯೆ ಎದುರಾದರೂ ಅವುಗಳನ್ನು ಪರಿಹರಿಸುವುದು ಕಷ್ಟಸಾಧ್ಯ. ಹೀಗಾಗಿ ಭೂಮಿಯಲ್ಲಿ ಉಡಾವಣೆಗೆ ಮುಂಚಿನ ಸವಾಲುಗಳೇ ಬಾಹ್ಯಾಕಾಶ ರಂಗದಲ್ಲಿ ಕಾರ್ಯನಿರ್ವಹಿಸುವವರಿಗೆ ಮುಖ್ಯವಾಗಿರುತ್ತದೆ ಎಂದೂ ಇಸ್ರೋ ಸ್ಪೇಸ್ ಗರ್ಲ್ ಎಂದೇ ಖ್ಯಾತರಾಗಿರುವ ಅನುರಾಧ ಎಸ್.ಪ್ರಕಾಶ್ ಹೇಳಿದರು.


ಇನ್ನರ್ ವೀಲ್ ಜಿಲ್ಲೆ ೩೧೮ನ ಅಧ್ಯಕ್ಷೆ ಪೂರ್ಣಿಮಾರವಿ ಮಾತನಾಡಿ, ಮ್ಯಾಂಚೆಸ್ಟರ್‌ನಲ್ಲಿ ೧೦೦ ವರ್ಷಗಳ ಹಿಂದೆ ಪ್ರಾರಂಭವಾದ ಇನ್ನರ್ ವೀಲ್ ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದೆ. ಮಹಿಳೆಯರ ಪುಟ್ಟ ಸಂಘವಾಗಿ ಪ್ರಾರಂಭವಾದದ್ದು, ಇದೀಗ ಜಗತ್ತಿನ ಅತೀ ದೊಡ್ಡ ಮಹಿಳಾ ಸಂಘವಾಗಿ ಹೊರಹೊಮ್ಮಿದೆ. ಇನ್ನರ್ ವೀಲ್ ೧೦೦ ದೇಶಗಳಲ್ಲಿ ೪ ಸಾವಿರ ಕ್ಲಬ್‌ಗಳಿಂದ ೧.೪೦ ಲಕ್ಷ ಸದಸ್ಯೆಯರು ಇದ್ದಾರೆ ಎಂದು ಮಾಹಿತಿ ನೀಡಿದರು.


ಬಾಲಕಿಯರಿಗೆ ೧೦೦ ಸೈಕಲ್‌ಗಳನ್ನು ಇಂದಿನಿಂದ ೮ ಕಂದಾಯ ಜಿಲ್ಲಾ ವ್ಯಾಪ್ತಿಯಲ್ಲಿ ವಿತರಿಸಲಾಗುತ್ತದೆ. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ಪ್ರಾರಂಭಿಕ ಹಂತವಾಗಿ ೫ ಸೈಕಲ್‌ಗಳನ್ನು ವಿತರಿಸಲಾಗುತ್ತದೆ. ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಪ್ರಯಾಣಿಕರ ತಂಗುದಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಸಾಮಾಜಿಕ ಚಟುವಟಿಕೆಗಳಿಗಾಗಿ ಜಾರಿಗೊಳಿಸಲಾಗಿದೆ ಎಂದೂ ಪೂರ್ಣಿಮಾ ರವಿ ತಿಳಿಸಿದರು.


ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯ ಇನ್ನರ್ ವೀಲ್‌ನ ೫೧ ಸಂಸ್ಥೆಗಳ ಅಧ್ಯಕ್ಷರು ತಮ್ಮ ಸಂಸ್ಥೆಯ ಧ್ವಜ ಹಿಡಿದು ಮೆರವಣಿಗೆ ಸಾಗಿಬಂದರು. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಸದಸ್ಯೆಯರು ಆರತಿಯೊಂದಿಗೆ ಸಮ್ಮೇಳನಕ್ಕೆ ಬಂದವರನ್ನು ಸ್ವಾಗತಿಸಿ ಗಮನ ಸೆಳೆದರು. ಅಂತೆಯೇ ಸ್ನಾಗತ ನತ್ಯವೂ ಆಕರ್ಷಕವಾಗಿತ್ತು.


ಜಿಲ್ಲಾ ಸಮ್ಮೇಳನ ಸಮಿತಿ ಅಧ್ಯಕ್ಷೆ ಡಾ.ವಿಮಲ ರಾಧಾಕಷ್ಣ, ಸಂಚಾಲಕಿ ಲತಾ ಚಂಗಪ್ಪ, ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಕನ್ನು ದೇವರಾಜ್, ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್, ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷೆ ನೈನಾ ಅಚ್ಚಪ್ಪ ಸೇರಿದಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.