ಹಿರೇಕೆರೂರ: ಸ್ಥಿತಿವಂತರು ಅಪಾರ ಹಣ ಖರ್ಚು ಮಾಡಿ ತಮ್ಮ ಮಕ್ಕಳಿಗೆ ಮನೆಪಾಠ ಮಾಡಿಸುತ್ತಾರೆ. ಬಡವರಿಗೆ ಅದು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ‘ವಿಜಯವಾಣಿ’ ಪತ್ರಿಕೆ ಎಲ್ಲ ವಿಷಯ ಒಳಗೊಂಡ ವಿದ್ಯಾರ್ಥಿ ಮಿತ್ರ ಪತ್ರಿಕೆ ಹೊರತರುತ್ತಿರುವುದು ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೂ ಸಹಕಾರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಣೆ ಮಾಡುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪತ್ರಿಕೆಗಳು ಕೇವಲ ಜನರಿಗೆ ಸುದ್ದಿಗಳನ್ನು ಕೊಡುವುದು ಮಾತ್ರವಲ್ಲ, ಬದಲಿಗೆ ಪ್ರತಿಯೊಂದು ಕ್ಷೇತ್ರಗಳ ಅಭಿವೃದ್ಧಿ ದಿಕ್ಕಿನಲ್ಲಿ ಚಿಂತನೆ ಮಾಡುತ್ತೇವೆ ಎಂಬುದಕ್ಕೆ ವಿದ್ಯಾರ್ಥಿ ಮಿತ್ರ ಪತ್ರಿಕೆ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ಪತ್ರಿಕೆಗಳಲ್ಲಿ ಬರುವ ಎಲ್ಲ ವಿಷಯ ಕರಗತ ಮಾಡಿಕೊಂಡು ಹೆಚ್ಚಿನ ಜ್ಞಾನ ಸಂಪಾದಿಸಬೇಕು ಎಂದರು.
ಪತ್ರಿಕಾ ದಿನಾಚರಣೆ ನಿಮಿತ್ತ ಪತ್ರಿಕಾ ಏಜೆಂಟರು, ಪತ್ರಕರ್ತರಾದ ಇಂದುಧರ ಹಳಕಟ್ಟಿ ಮತ್ತು ಶಿಕ್ಷಣ ಪ್ರೇಮಿ ರವಿ ಸಿದ್ದಪ್ಪಗೌಡ್ರ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಎನ್. ಸುರೇಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ದುರ್ಗಪ್ಪ ನೀರಲಗಿ, ಶಿಕ್ಷಕರಾದ ಬಿ.ಎಂ. ಮುದಕನಗೌಡ್ರ, ಸುಧಾ ಬಣಕಾರ, ಸುಮಾ ಎಸ್., ಎಸ್.ವಿ. ಪಾಟೀಲ, ಪಿ.ಎಸ್. ವರಾದ, ಬಸವನಗೌಡ ಬಣಕಾರ, ನಟರಾಜ, ಪರಮೇಶ ಹಲಗೇರಿ, ಸೌಮ್ಯಾ, ರಾಜು ಚಳಕೊಪ್ಪ ಇದ್ದರು.