ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಜಯಗಳಿಸಿದ ಮಾಜಿ ಶಾಸಕ ಆರ್. ನರೇಂದ್ರ ಅವರನ್ನು ಕಾರ್ಯಕರ್ತರು ಸನ್ಮಾನಿಸಿದರು. ನಂಜುಂಡಸ್ವಾಮಿ, ನಾಗಣ್ಣ, ಮಲ್ಲುಸ್ವಾಮಿ, ಶ್ರೀನಿವಾಸಗೌಡ ಇತರರು ಇದ್ದರು.  
ಜಿಲ್ಲೆ

ಮುಂದಿನ ದಿನಗಳಲ್ಲೂ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು

ಹನೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ ಮಾಜಿ ಶಾಸಕ ಆರ್. ನರೇಂದ್ರ ಅವರನ್ನು ಶುಕ್ರವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಸನ್ಮಾನಿಸಿದರು.

ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಆರ್.ನರೇಂದ್ರ ಅವರು ಶಾಸಕರಾಗಿದ್ದ ಮೂರು ಅವಧಿಯಲ್ಲೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಕೆ.ಶಿಫ್ ಯೋಜನೆಯಡಿ ರಸ್ತೆ ಅಭಿವೃದ್ಧಿ, ಏಕಲವ್ಯ, ಮುರಾರ್ಜಿ, ಇಂದಿರಾಗಾಂಧಿ ವಸತಿ ಶಾಲೆಗಳ ಸ್ಥಾಪನೆ, ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಜತೆಗೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ವೇಳೆ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದರು ಎಂದು ಹೇಳಿದರು.

ರೈತರಿಗೆ ಬಡ್ಡಿರಹಿತ ಸಾಲ ನೀಡುವುದ್ಕಕಾಗಿ ಹೆಚ್ಚಿನ ಅನುದಾನ ನೀಡಿದ್ದರು. ಅಲ್ಲದೆ ಹನೂರಿನ ಪಿಎಸಿಸಿ ನಿರ್ದೇಕರಾಗಿದ್ದ ಸಂದರ್ಭ ಸಂಘದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದರು. ಇದರಿಂದ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದ್ದು, 2.5 ಕೋಟಿ ರೂ. ಉಳಿತಾಯ ಹೊಂದಿದೆ. ಜತೆಗೆ 1.75 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಇದೀಗ ನಡೆದ ಚುನಾವಣೆಯಲ್ಲಿ ನರೇಂದ್ರ ಅವರು ಹೆಚ್ಚಿನ ಮತದ ಅಂತರದಿಂದ ಜಯ ಗಳಿಸಿರುವುದು ಸಂಘದ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಹನೂರು ಪಿಎಸಿಸಿ ನಿರ್ದೇಶಕ ಆರ್.ನರೇಂದ್ರ ಮಾತನಾಡಿ, ಈವರೆಗೂ ಸಹಕಾರ ಸಂಘಗಳಿಗೆ ಚುನಾವಣೆ ನಡೆದಿರಲಿಲ್ಲ. ಎಲ್ಲರ ಸಹಮತದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಎಲ್ಲರಿಗೂ ಸ್ಥಾನಮಾನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿಯ ಕೆಲ ಮುಖಂಡರು ರಾಜಕೀಯ ಪಿತೂರಿ ನಡೆಸಿದ ಪರಿಣಾಮ ಚುನಾವಣೆ ನಡೆಯುವಂತಾಯಿತು. ಅಭಿವೃದ್ಧಿ ಕಾರ್ಯಗಳಿಂದಾಗಿ ಈ ಚುನಾವಣೆಯಲ್ಲಿ ನಾನು ಜಯಗಳಿಸಿರುವುದೇ ಸಾಕ್ಷಿ. ಮುಂದಿನ ದಿನಗಳಲ್ಲೂ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಜತೆಗೆ ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿ ಕೊಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಪಿಎಸಿಸಿ ನಿರ್ದೇಶಕರಾದ ಶ್ರೀನಿವಾಸಗೌಡ, ಅನಿಲ್‌ಕುಮಾರ್, ಚಿಕ್ಕಮಾಲಾಪುರ ಗ್ರಾಪಂ ಸದಸ್ಯ ನಾಗಣ್ಣ, ಮುಖಂಡರಾದ ಮಲ್ಲುಸ್ವಾಮಿ, ಮರಿಗೌಡ, ರಾಜೇಶ್ ಇತರರು ಇದ್ದರು.