ಮದ್ದೂರು: ಮಾದರಿ ಪಟ್ಟಣವನ್ನಾಗಿಸಬೇಕು ಎಂಬ ಸದುದ್ದೇಶದಿಂದ ಹಲವಾರು ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಹೂತಗೆರೆ ಗ್ರಾಮದಲ್ಲಿ ಸೋಮವಾರ ಸ್ವಚ್ಛ ಭಾರತ್ ಅನುದಾನ ಮತ್ತು 15ನೇ ಹಣಕಾಸು ಯೋಜನೆಯಡಿ ಬಿಡುಗಡೆಗೊಂಡಿರುವ 1.12 ಕೋಟಿ ರೂ. ವೆಚ್ಚದ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣವು ಕಳೆದ ಹಲವಾರು ವರ್ಷಗಳಿಂದಲೂ ಅಭಿವೃದ್ಧಿ ಕಾಣದೆ ಕಾಮಗಾರಿಗಳು ಕುಂಠಿತಗೊಂಡಿದ್ದ ಹಿನ್ನೆಲೆಯಲ್ಲಿ ತಾವು ಪೌರಾಡಳಿತ ಸಚಿವರನ್ನು ಸಂಪರ್ಕಿಸಿ ಸುಮಾರು 10 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಪಟ್ಟಣವೊಂದಕ್ಕೆ ತಂದು ಅಭಿವೃದ್ಧಿ ಕೈಗೊಂಡಿದ್ದು, ಈಗಾಗಲೇ ಯುಜಿಡಿ, ಬೀದಿ ದೀಪದ ವ್ಯವಸ್ಥೆ, ಒಳಚರಂಡಿ ಸಂಸ್ಕರಣ ಘಟಕ ಹಾಗೂ ಹಲವು ಬಡಾವಣೆಗಳ ರಸ್ತೆ ಗಳಿಗೆ ಸಿಮೆಂಟ್ ರಸ್ತೆ ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕ ಸೇವೆಗೆ ಅನುಕೂಲ ಕಲ್ಪಿಸಿರುವುದಾಗಿ ಹೇಳಿದರು.
ಸ್ಥಳೀಯ ಸಾರ್ವಜನಿಕರ ಬಹುದಿನದ ಬೇಡಿಕೆಯಾದ ಪೇಟೆಬೀದಿ ಅಗಲೀಕರಣಕ್ಕೆ ಈಗಾಗಲೇ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಕಾರ್ಯಯೋಜನೆ ರೂಪಿಸುತ್ತಿದ್ದು, ಮುಂದಿನ ಎರಡು-ಮೂರು ತಿಂಗಳಲ್ಲಿ ಅಂತಿಮ ಹಂತ ತಲುಪಲಿದ್ದು ಬಳಿಕ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿದ ತಕ್ಷಣವೇ ನೂರಡಿ ರಸ್ತೆಯನ್ನಾಗಿ ನಿರ್ಮಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಮದ್ದೂರು ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ನೂತನವಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸಂಪರ್ಕದ ರಸ್ತೆಯನ್ನು ನಿರ್ಮಿಸಲು ಮುಂದಾಗಿದ್ದು, ಪುರಸಭೆ ವ್ಯಾಪ್ತಿಯಲ್ಲಿ ನಿವೇಶನವಿಲ್ಲದ ಕಾರಣ ಹೂತಗೆರೆ ಗ್ರಾಮದಲ್ಲಿ ಜಮೀನನ್ನು ಖರೀದಿಸಿ ಒಂದೆಡೆ ಕಸ ವಿಲೇವಾರಿ ಮಾಡುವ ಮೂಲಕ ಪಟ್ಟಣದ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ತಿಳಿಸಿದರು.
ಪುರಸಭೆ ಕಚೇರಿಗೆ ಸ್ಥಳೀಯ ನಿವಾಸಿಗಳು ಅಲೆದಾಡಿಸುವುದನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ಆನ್‌ಲೈನ್ ವ್ಯವಸ್ಥೆ ಕೈಗೊಂಡಿದ್ದು ಮತ್ತು ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಜತೆಗೆ ಎ ಮತ್ತು ಬಿ ಖಾತೆಯ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆಯೆಂದರು. ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಬಿ.ಸಿ.ಸರ್ವಮಂಗಳಾ, ಪ್ರಮೀಳಾ, ಬಸವರಾಜು, ಎಂ.ಬಿ.ಸಚಿನ್, ವೆಂಕಟೇಶ್, ಸಿದ್ದರಾಜು, ಸುರೇಶ್‌ಕುಮಾರ್, ಮುಖ್ಯಾಧಿಕಾರಿ ಶ್ರೀಧರ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಶಂಕರಲಿಂಗಯ್ಯ ಇತರಿದ್ದರು.