ಜಿಲ್ಲೆ

ಮಕ್ಕಳ ಅಪಹರಣ ಪ್ರಕರಣಕ್ಕೆ ಮಹಾತಿರುವು!

ತುಮಕೂರು ಡೆಸ್ಕ್

ಸೋರಲಮಾವು ಶ್ರೀಹರ್ಷ ತುಮಕೂರು
ಗುಬ್ಬಿ ಚನ್ನಬಸವೇಶ್ವರ ದೇವಾಲಯದ ಮುಂಭಾಗ ನಾಪತ್ತೆಯಾಗಿದ್ದ ಮಗು ಅಪಹರಣ ಹಾಗೂ ಅಕ್ರಮ ಮಾರಾಟ ಪ್ರಕರಣದ ತನಿಖೆಯಲ್ಲಿ ಪತ್ತೆಯಾಗಿದ್ದ 6 ಮಕ್ಕಳ ನೈಜ ಪಾಲಕರನ್ನು ಪತ್ತೆ ಮಾಡಲು ಪೊಲೀಸ್​ ಇಲಾಖೆ ಮೀನಮೇಷ ಎಣಿಸುತ್ತಿರುವುದು ತನಿಖೆ ದಾರಿತಪ್ಪಿರುವ ಸೂಚನೆ ಎನ್ನಿಸಿದೆ.


ಬಾಲ ನ್ಯಾಯ ಕಾಯ್ದೆ 80, 81ರ ಆಕ್ಟ್​ ಅಡಿಯಲ್ಲಿ ಮಕ್ಕಳ ಮಾರಾಟ ಹಾಗೂ ಅನಧಿಕೃತವಾಗಿ ಸಾಕುವುದು ತಪು$್ಪ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಅಪಹರಣಕಾರರಿಂದಮಕ್ಕಳನ್ನು ಪಡೆದಿರುವವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಹಾಗೂ ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಎಚ್ಚರಿಕೆ ವಹಿಸದಿರುವುದು ಪ್ರಕರಣವನ್ನೇ ದಿಕ್ಕುತಪ್ಪಿಸುವಂತೆ ಮಾಡಿದೆ.


ಮಕ್ಕಳ ಮಾರಾಟ ಪ್ರಕರಣದಲ್ಲಿ ಪತ್ತೆಯಾಗಿದ್ದ ಏಳು ಮಕ್ಕಳ ಪೈಕಿ ಒಂದು ಮಗುವನ್ನು ನೈಜ ಪಾಲಕರಿಗೆ ಹಸ್ತಾಂತರಿಸಲಾಗಿತ್ತು. ಇನ್ನುಳಿದ 6 ಮಕ್ಕಳಿಗೆ ನೈಜ ಪಾಲಕರು ಪತ್ತೆಯಾಗುವವರೆಗೂ ಆಶ್ರಯ ನೀಡುವಂತೆ ಗುಬ್ಬಿ ವೃತ್ತ ಪೊಲೀಸ್​ ನಿರೀಕ್ಷಕ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಸಲ್ಲಿಸಿದ್ದ ಮನವಿಯಂತೆ ಆರು ವರ್ಷದೊಳಗಿನ ಮಕ್ಕಳಿಗೆ ಆಶ್ರಯ ನೀಡುವ ದಯಾಕಿರಣ ದತ್ತು ಸಂಸ್ಥೆಯಲ್ಲಿ ಆಶ್ರಯ ನೀಡಲಾಗಿತ್ತು.
ಆರೋಪಿಗಳಿಂದ ಮಕ್ಕಳನ್ನು ಅನಧಿಕೃತವಾಗಿ ಪಡೆದಿದ್ದ ಪಾಲಕರು ಈ ಮಕ್ಕಳಿಗಾಗಿ ಹೈಕೋರ್ಟ್​ ಮೆಟ್ಟಿಲೇರಿದ್ದರಿಂದ ಮಾನವೀಯತೆ ದೃಷ್ಟಿಯಿಂದ ಒಂದು ತಿಂಗಳ ಮಟ್ಟಿಗೆ ಮಕ್ಕಳನ್ನು ಪಡೆದುಕೊಳ್ಳುವಂತೆ ನೀಡಿದ್ದ ಮಧ್ಯಂತರ ಆದೇಶ ಕೂಡ ಆಶ್ಚರ್ಯ ಮೂಡಿಸಿದೆ.

ಈ ತೀರ್ಪು ಪ್ರಶ್ನಿಸಿ ಸಂ, ಸಂಸ್ಥೆಗಳು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಆರು ಮಕ್ಕಳನ್ನು ಅವರ ಆಶ್ರಯ ಪೋಷಕರ ವಶಕ್ಕೆ ನೀಡಲಾಗಿದ್ದು, ಮಕ್ಕಳನ್ನು ಕಳೆದುಕೊಂಡಿರುವ ನೈಜ ಪಾಲಕರು ಕೂಡ ಮಕ್ಕಳಿಗಾಗಿ ಪರಿತಪಿಸುತ್ತಿರುವ ಬಗ್ಗೆ ಕೋರ್ಟ್​ಗೆ ಮನವರಿಕೆ ಮಾಡಿಕೊಡಲು ಮಕ್ಕಳ ರಕ್ಷಣಾ ಇಲಾಖೆ ಪ್ರಯತ್ನಿಸಬೇಕಿದೆ. ಮಕ್ಕಳನ್ನು ಅನಧಿಕೃತವಾಗಿ ಪಡೆದಿರುವ ಪೋಷಕರಿಗೆ ಮಕ್ಕಳನ್ನು ವಾಪಸ್​ ನೀಡಲು ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದ್ದರೂ ಕೋರ್ಟ್​ಗೆ ಜೆಜೆ ಆಕ್ಟ್​ ಬಗ್ಗೆ ಮನವರಿಕೆ ಮಾಡಿಕೊಡಲು ರಾಜ್ಯ ದತ್ತು ಸಂಪನ್ಮೂಲ ಪ್ರಾಧಿಕಾರ ಸಿದ್ಧತೆ ನಡೆಸಿದೆ.

ಪತ್ತೆಮಾಡದ ಪೊಲೀಸರು!
ಮಕ್ಕಳ ಅಪಹರಣ ಹಾಗೂ ಮಾರಾಟ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದರು. ಆದರೆ, ನಂತರ ಮಕ್ಕಳ ನೈಜ ಪಾಲಕರನ್ನು ಪತ್ತೆ ಮಾಡುವಲ್ಲಿ ಉದಾಸೀನ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಮಕ್ಕಳ ನೈಜ ಪಾಲಕರು ಪತ್ತೆಯಾಗುವವರೆಗೂ ದಯಾಕಿರಣ ಸಂಸ್ಥೆಯಲ್ಲಿ ಮಕ್ಕಳಿಗೆ ಆಶ್ರಯ ನೀಡುವಂತೆ ಪೊಲೀಸರು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಮನವಿ ಸಲ್ಲಿಸಿದ್ದರು. ಈಗ ನೈಜ ಪಾಲಕರ ಪತ್ತೆಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಜಿಲ್ಲಾ ಪೊಲೀಸ್​ ಅಧೀಕ್ಷಕರನ್ನು ಕೋರಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಆ.9ರೊಳಗೆ ಮಕ್ಕಳ ಮೂಲ ಪಾಲಕರ ಪತ್ತೆ ಹಾಗೂ ಜೆಜೆ ಕಾಯ್ದೆಯಡಿ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ತನಿಖಾಧಿಕಾರಿ ಗುಬ್ಬಿ ವೃತ್ತ ಸಿಪಿಐಗೆ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಜ್ಞಾಪನ ಹೊರಡಿಸಿದ್ದಾರೆ.

ಕೋರ್ಟ್​ ಆದೇಶದಂತೆ ಸಾಕು ಪೋಷಕರ ವಶಕ್ಕೆ ಮಕ್ಕಳು
ಪೊಲೀಸರಿಂದ ರಕ್ಷಣೆಗೆ ಒಳಪಟ್ಟು, ಮಕ್ಕಳ ರಕ್ಷಣಾ ಸಮಿತಿ ಆದೇಶದಂತೆ ಆರು ಮಕ್ಕಳನ್ನು ಕುಣಿಗಲ್​ ತಾಲೂಕು ವಾಣಿಗೆರೆ ದಯಾಕಿರಣ ದತ್ತು ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಅಪಹರಣ ಕಾರರಿಂದ ಅನಧಿಕೃತವಾಗಿ ಮಕ್ಕಳನ್ನು ಪಡೆದು ಸಾಕುತ್ತಿದ್ದ ಪೋಷಕರು ಮಾನವೀಯ ನೆಲೆಯ ಹಿನ್ನೆಲೆಯಲ್ಲಿ ಮಕ್ಕಳನ್ನು ನೀಡಬೇಕು ಎಂದು ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ರಿಟ್​ ಪಿಟಿಷನ್​ಗೆ ಸಂಬಂಧಿ ಸಿದಂತೆ ಜು.25ರಂದು ಹೈಕೋರ್ಟ್​ ಏಕಸದಸ್ಯ ಪೀಠ ನೀಡಿರುವ ಮಧ್ಯಂತರ ಆದೇಶ ದಂತೆ ಮಕ್ಕಳನ್ನು ಒಂದು ತಿಂಗಳ ಮಟ್ಟಿಗೆ ಸಾಕು ಪೋಷಕರ ವಶಕ್ಕೆ ನೀಡಲಾಗಿದೆ. ಮಧ್ಯಂತರ ಆದೇಶದಂತೆ ಜು.27ರಂದು ಪೊಲೀಸರ ಸಮಕ್ಷಮದಲ್ಲಿಯೇ ಮಕ್ಕಳನ್ನು ಸಾಕು ಪೋಷಕರ ವಶಕ್ಕೆ ನೀಡಲಾಗಿದೆ ಎಂದು ಮಕ್ಕಳ ರಕ್ಷಣಾ ಸಮಿತಿಗೆ ಜು.29ರಂದು ದಯಾಕಿರಣ ದತ್ತು ಕೇಂದ್ರ ವರದಿ ನೀಡಿದೆ.

ಅಪಹರಣವಾಗಿರೊ ಮಕ್ಕಳ ಸಂಖ್ಯೆಯೂ ನಿಗೂಢ!?
ಮಕ್ಕಳ ಅಪಹರಣ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದವು ಎನ್ನಲಾಗಿದ್ದು, ನೈಜವಾಗಿ ಜಿಲ್ಲೆಯಲ್ಲಿ ನೂರಾರು ಮಕ್ಕಳ ಅಪಹರಣ ಹಾಗೂ ಮಾರಾಟ ನಡೆದಿರುವುದನ್ನು ತನಿಖೆ ವೇಳೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದರು ಎನ್ನಲಾಗಿದೆ. ನೈಜ ಸಂಖ್ಯೆಯನ್ನು ಬಹಿರಂಗಪಡಿಸಿದರೆ ಅದರ ತನಿಖೆಯ ಸಾಧಕ, ಬಾದಕ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಸಾಧ್ಯತೆಯಿದ್ದ ಕಾರಣದಿಂದ ಅಂತಿಮವಾಗಿ ಸೂಕ್ತ ಸಾಾಧಾರವಿದ್ದ 9 ಪ್ರಕರಣಗಳಲ್ಲಿ ಮಾತ್ರ ಎ್​ಐಆರ್​ ದಾಖಲಿಸಿ ಆರೋಪಿಗಳನ್ನು ಜೈಲಿಗಟ್ಟಲಾಗಿತ್ತು. ಜಿಲ್ಲೆಯಲ್ಲಿ ಮಕ್ಕಳಿಲ್ಲದ ನೂರಾರು ದಂಪತಿಗಳಿಗೆ ಅಪಹರಣ ಮಾಡಿದ ಮಕ್ಕಳನ್ನು ಮಾರಾಟ ಮಾಡಿರುವ ಶಂಕೆಯಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್​ ಇಲಾಖೆ ತಲೆಕೆಡಿಸಿಕೊಂಡಂತೆ ಕಾಣಿಸಲಿಲ್ಲ. ಸಿಕ್ಕ ಮಕ್ಕಳಿಗಷ್ಟೇ ದತ್ತು ಸ್ವೀಕಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿ ಸುಮ್ಮನಾಗಿದ್ದಾರೆ.

ಮಕ್ಕಳನ್ನು ಅನಧಿಕೃತವಾಗಿ ಪಡೆದಿರುವ ಪೋಷಕರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿಲ್ಲ. ಆದರೆ, ಬಾಲನ್ಯಾಯ ಕಾಯ್ದೆ 80 ಮತ್ತು 81ಅಡಿಯಲ್ಲಿ ಈಗಾಗಲೇ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಸಿ ಆದೇಶ ನೀಡಲಿದೆ. ಮಕ್ಕಳ ನೈಜ ಪಾಲಕರ ಪತ್ತೆಗೆ ಕೈಗೊಂಡ ಕ್ರಮದ ಬಗ್ಗೆ ಪೊಲೀಸ್​ ಇಲಾಖೆಯಿಂದ ವರದಿ ಕೇಳಿದ್ದೇವೆ.ದಿನೇಶ್​ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ