ಜಿಲ್ಲೆ

ಗ್ರೇಟ್ ಮಲ್ನಾಡ್ ಚಾಲೆಂಜ್ ಸೈಕ್ಲಿಂಗ್ ಯಾನಕ್ಕೆ ಚಾಲನೆ

madikerimailmanju

ಚಿಕ್ಕಮಗಳೂರು: ಜಾಗತಿಕ ತಾಪಮಾನ ಹೆಚ್ಚಳದಿಂದ ಪರಿಸರದ ಮೇಲೆ ದುಷ್ಪರಿಣಾಮವಾಗುತ್ತಿದ್ದು ಪರಿಸರ ಸಂರಕ್ಷಣೆಗೆ ಸಾರ್ವಜನಿಕ ಜಾಗೃತಿ ಅತ್ಯಂತ ಅಗತ್ಯ ಎಂದು ಚಿಕ್ಕಮಗಳೂರು ಎಸಿಎಫ್ ಮುದ್ದಣ್ಣ ತಿಳಿಸಿದರು.

ನಗರದ ಹೋಟೆಲ್ ಆದ್ರಿಕಾ ಆವರಣದಲ್ಲಿ ಶನಿವಾರದಿಂದ ಡಿ.4ರವರೆಗೆ ಐ ಸೈಕ್ಲಿಂಗ್ ಸಂಸ್ಥೆ ಆಯೋಜಿಸಿರುವ ಗ್ರೇಟ್ ಮಲ್ನಾಡ್ ಚಾಲೆಂಜ್ 2020 ಸೈಕ್ಲಿಂಗ್ ಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾಗತಿಕ ತಾಪಮಾನ ಏರಿಕೆ

ಪ್ರಪಂಚದಾದ್ಯಂತ ವಾಹನಗಳ ದಟ್ಟಣೆಯಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಅವುಗಳು ಹೊರ ಸೂಸುವ ಇಂಗಾಲದ ಹೊಗೆಯು ಪರಿಸರ ಹಾಳು ಮಾಡುವುದಲ್ಲದೆ, ಮನುಷ್ಯನ ಆರೋಗ್ಯದ ಮೇಲೆ ಸಹ ಕೆಟ್ಟ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆ ಸೈಕ್ಲಿಂಗ್ ಮೂಲಕ ಪರಿಸರಕ್ಕೆ ಪೂರಕವಾಗಿ ಜನಜಾಗೃತಿ ಮೂಡಿಸುತ್ತಿರುವುದು ಅಭಿನಂದನಾರ್ಹ ಎಂದರು.

ಸೈಕಲ್ ಬಳಕೆ ಆರೋಗ್ಯಕ್ಕೆ ಹಿತ

ಮನುಷ್ಯನು ನಿತ್ಯ ಜೀವನದಲ್ಲಿ ಓಡಾಟದ ಕಾರ್ಯಗಳಲ್ಲಿ ಕನಿಷ್ಠ ಎರಡರಿಂದ ಮೂರು ಕಿ.ಮೀ ವ್ಯಾಪ್ತಿ ದೂರದವರೆಗೆ ಓಡಾಡುವಾಗ ಸೈಕಲ್ ಬಳಕೆ ಮಾಡುವುದರಿಂದ ಆರೋಗ್ಯದ ಜತೆಗೆ ಪರಿಸರ ಸಂರಕ್ಷಿಸಿದಂತಾಗುವುದು. ಅರಣ್ಯದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕೂಡ ಜನರಲ್ಲಿ ಅರಿವು ಮೂಡಿಸಬೇಕು. ಪರಿಸರ ಸಂರಕ್ಷಿಸಿದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ತಡೆಗಟ್ಟಬಹುದು ಎಂದರು.

ಅನ್ಯ ರಾಜ್ಯಗಳಿಂದಲೂ ಸ್ಪರ್ಧಿಗಳು

ಐ ಸೈಕ್ಲಿಂಗ್ ಸಂಸ್ಥೆ ಸಂಸ್ಥಾಪಕ, ಗ್ರೇಟ್ ಮಲ್ನಾಡ್ ಚಾಲೆಂಜ್ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಮಾತನಾಡಿ ಸೈಕ್ಲಿಂಗ್‍ನಲ್ಲಿ ತಮಿಳುನಾಡು, ವೆಲ್ಲೂರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ರಾಜ್ಯ ಮಟ್ಟದಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದು ಕರೊನಾ ಹಿನ್ನೆಲೆಯಲ್ಲಿ ಆರೋಗ್ಯ ಸುರಕ್ಷತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಸ್ಪರ್ಧಿಗಳ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಲಾಗಿದೆ ಎಂದರು.

ಏಳು ದಿನ ಸೈಕಲ್ ಯಾನ

ಏಳು ದಿನಗಳ ಈ ಪಯಣ ಕುಂದಾಪುರದಲ್ಲಿ ಕೊನೆಗೊಳ್ಳಲಿದ್ದು, ಹೊರನಾಡು ಅನ್ನಪೂರ್ಣೇಶ್ವರಿ, ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ಭದ್ರಾ ಅಭಯಾರಣ್ಯ, ಹುಲಿ ಸಂರಕ್ಷಿತಾರಣ್ಯ, ಕುದುರೆಮುಖ ವನ್ಯಜೀವಿ ವಿಭಾಗ ಸೇರಿದಂತೆ ಅಪೂರ್ವ ಸ್ಥಳಗಳ ಮೂಲಕ ಕ್ರಮಿಸಲಿದ್ದು ದೇವರಮನೆ ಅಡ್ಡಗುಡ್ಡ, ಕಳಸ, ಆಗುಂಬೆ, ನಿಟ್ಟೂರು, ಕೊಲ್ಲೂರುಗಳಲ್ಲಿ ತಂಡವು ವಾಸ್ತವ್ಯ ಮಾಡಲಿದೆÉ ಎಂದು ತಿಳಿಸಿದರು.

ಜನಜಾಗೃತಿಗೆ ಸಂದೇಶ

ಮಲೆನಾಡಿನ ಪಶ್ಚಿಮ ಘಟ್ಟಗಳ ಸಾಲನ್ನು ಯುನೆಸ್ಕೋ 2012ರಲ್ಲಿ ಸಾಂಸ್ಕøತಿಕ ಪರಂಪರೆಯ ತಾಣವಾಗಿ ಘೋಷಿಸಿದೆ. ಮಲ್ನಾಡ್ ಚಾಲೆಂಜ್‍ನ ಈ ಸಾಹಸ ಯಾನದಲ್ಲಿ ಸೈಕ್ಲಿಸ್ಟ್ ಗಳು ಹಸಿರ ಸಿರಿ ನಾಶ ಮಾಡಬೇಡಿ, ಪ್ರಕೃತಿ ಸೌಂದರ್ಯ ಕೆಡಿಸಬೇಡಿ. ಭೂಮಿತಾಯಿಯನ್ನು ಕಾಪಾಡಿ, ಗಿಡ-ಮರ ಬೆಳೆಸಿ ಪರಿಸರ ಸಂರಕ್ಷಿಸಿ, ಜಲಮೂಲಗಳನ್ನು ಸಂರಕ್ಷಿಸಿ ಮತ್ತಿತರ ಘೋಷವಾಕ್ಯದ ಸಂದೇಶ ಸಾರಲಿದ್ದಾರೆ. ಅಂತಿಮವಾಗಿ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿಗಳನ್ನು ವಿತರಿಸಲಾಗುವುದು ಎಂದರು.

ಡಿ.ಎಂ.ಪೂರ್ಣೇಶ್, ಐ ಸೈಕ್ಲಿಂಗ್ ಮುಖ್ಯ ವ್ಯವಸ್ಥಾಪಕ ಕೆ.ಎಸ್.ಲೋಕೇಶ್, ಪ್ರದೀಪ್, ಫಯಾಜ್, ಸುನೀಲ್‍ಗೌಡ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಇದ್ದರು.