ಹುಬ್ಬಳ್ಳಿ : ಇಲ್ಲಿನ ವರೂರ ನವಗ್ರಹ ಕ್ಷೇತ್ರದಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ವೃತ್ತಿಪರ ಕುಸ್ತಿಪಟು, ವೇಟ್ಲಿಫ್ಟರ್, ನಟ ಗ್ರೇಟ್ ಕಲಿ ಶನಿವಾರ ಪಾಲ್ಗೊಂಡರು.
ನವಗ್ರಹ ಕ್ಷೇತ್ರಕ್ಕೆ ಆಗಮಿಸಿದ ಗ್ರೇಟ್ ಕಲಿಯನ್ನು (ದಲಿಪಸಿಂಗ್ ರಾಣಾ) ರಾಷ್ಟ್ರಸಂತ ಶ್ರೀ ಗುಣಧರನಂದಿ ಮಹಾರಾಜರು ಸನ್ಮಾನಿಸಿದರು. ಯುವಕರಿಗೆ ಕುಸ್ತಿ ತರಬೇತಿ ನೀಡುತ್ತಿರುವ ಗ್ರೇಟ್ ಕಲಿಯ ಶಿಷ್ಯರು ಒಲಿಂಪಿಕ್ನಲ್ಲಿ ಭಾರತಕ್ಕೆ ಚಿನ್ನದ ಪದಕಗಳನ್ನು ಗೆಲ್ಲಲಿ ಎಂದು ಹಾರೈಸಿದರು.
ಮಾದಕ ದ್ರವ್ಯದ ವಿರುದ್ಧವೂ ಗ್ರೆಟ್ ಕಲಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಯುವಕರು ಮಾದಕ ದ್ರವ್ಯಗಳ ಸೇವನೆಯಿಂದ ದೂರ ಇರಬೇಕು. ಉತ್ತಮ ಆರೋಗ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರೇಟ್ ಕಲಿ, ನಾನು ಮೊದಲಿನಿಂದಲೂ ಸಾಧು, ಸಂತರು ಇದ್ದಲ್ಲಿ ಹೋಗಿ ಆಶೀರ್ವಾದ ಪಡೆಯುತ್ತಿರುತ್ತೇನೆ. ವರೂರ ನವಗ್ರಹ ಕ್ಷೇತ್ರದಲ್ಲಿ ಅತ್ಯುತ್ತಮ ಆಧ್ಯಾತ್ಮಿಕ ವಾತಾವರಣ ರೂಪಗೊಂಡಿದೆ. ಭಕ್ತರು ಇಲ್ಲಿಗೆ ಬಂದು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಆಶೀರ್ವಾದ ಪಡೆಯುವ ಮೂಲಕ ಭವಿಷ್ಯದ ಬಗ್ಗೆ ಅವರಿಂದ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವರೂರ ನವಗ್ರಹ ಕ್ಷೇತ್ರದಲ್ಲಿ ಮುನಿಗಳ ಸತ್ಸಂಗ ಕೇಳುತ್ತಿದ್ದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇಲ್ಲಿ ಮುನಿಗಳು ಧಾರ್ವಿುಕ ಕಾರ್ಯಗಳ ಜತೆಗೆ ಶೈಕ್ಷಣಿಕ ಕ್ರಾಂತಿಯನ್ನೂ ಮಾಡಿದ್ದಾರೆ. ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರನ್ನು ಭೇಟಿ ಮಾಡಬೇಕೆಂಬ ಬಹುದಿನಗಳ ನನ್ನ ಆಶಯ ಈಡೇರಿದೆ ಎಂದು ಹೇಳಿದರು.
ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕಾದರೆ ಸಾಧು-ಸಂತರ ಆಶೀರ್ವಾದ ಅಗತ್ಯ. ನಿತ್ಯ ಜೀವನದ ಜಂಜಾಟದಲ್ಲಿ ಸಿಲುಕಿರುತ್ತೇವೆ. ಸಾಧು-ಸಂತರ ಆಶೀರ್ವಾದದಿಂದ ಸ್ಥಗಿತಗೊಂಡ ಕೆಲಸವೂ ಆಗುತ್ತವೆ. ಸಾಧುಗಳು ತಮ್ಮ ಜೀವನ ತೊರೆದು ತಪಸ್ಸು ಮಾಡುತ್ತಾರೆ. ಋಷಿ, ಮುನಿಗಳ ತಪಸ್ಸಿನಿಂದ ಭಾರತವು ನಡೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ಗ್ರೇಟ್ ಕಲಿಯನ್ನು ಸನ್ಮಾನಿಸಿದರು.
ವಿವಿಧ ಆಚಾರ್ಯ ಶ್ರೀಗಳು, ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ನೀಲಕುಮಾರ ಅಜಮೇರಾ, ಅನಿಲ ಜಮಗೆ ಹಾಗೂ ಇತರರು ಇದ್ದರು.