ಜಿಲ್ಲೆ

ಕುಂಬಾರ ಗಡಿಗೆ ಗ್ರಾಮದಲ್ಲಿ ಸ್ಮಶಾನ ಮೌನ

ಮಡಿಕೇರಿ
ಅಕ್ಷರಶಃ ಪಶುವಿನಂತೆ ವರ್ತಿಸಿದ ದುಷ್ಕರ್ಮಿಯ ಕೃತ್ಯಕ್ಕೆ ಇಡೀ ಕೊಡಗು ಬೆಚ್ಚಿಬಿದ್ದಿದೆ. ಮದುವೆಗಾಗಿ ೨ ವರ್ಷ ಕಾಯಲು ಆಗದೆ ತಾನು ಪ್ರೀತಿಸಿದವಳ ತಲೆ ಕತ್ತರಿಸಿ ಕೊಂಡೊಯ್ದ ಪೈಶಾಚಿಕ ಕೃತ್ಯರಿಂದ ಸೂರ್ಲಬ್ಬಿ ಬಳಿಯ ಕುಂಬಾರ ಗಡಿಗೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಗುರುವಾರ (ಮೇ ೯) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲು ಕ್ಷಣಗಣನೆ ಶುರುವಾಗುತ್ತಿದ್ದಂತೆಯೇ ಗÀರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಸೂರ್ಲಬ್ಬಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಸೇರಿ ಶಿಕ್ಷಕ ವೃಂದದಲ್ಲಿ ಕುತೂಹಲ ಗರಿಗೆದರಿತ್ತು. ಕಾರಣ ಈ ಶಾಲೆಯ ಏಕಮಾತ್ರ ವಿದ್ಯಾರ್ಥಿನಿ ಯು.ಎಸ್.ಮೀನಾಳ ಉತ್ತಮ ಫಲಿತಾಂಶಕ್ಕಾಗಿ ಎಲ್ಲರೂ ಶ್ರಮಪಟ್ಟಿದ್ದರು. ಫಲಿತಾಂಶ ಬಂದಾಗ ಮೀನಾ ೬೨೫ಕ್ಕೆ ೩೧೪ ಅಂಕ ಪಡೆದು ಉತ್ತೀರ್ಣಳಾಗಿದ್ದಳು. ಈ ಮೂಲಕ ಶಾಲೆಗೆ ಶೇ. ೧೦೦ರ ಫಲಿತಾಂಶ ತಂದುಕೊಟ್ಟಿದ್ದಳು. ಶಿಕ್ಷಕ ವೃಂದ ಸಂತಸಕ್ಕೆ ಪಾರವೇ ಇರಲಿಲ್ಲ.
ಮತ್ತೊಂದು ಕಡೆ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಯಾವುದೇ ಚಿಂತೆ ಮೀನಾಳಿಗೆ ಇದ್ದಂತೆ ಇರಲಿಲ್ಲ. ಇನ್ನೂ ೧೬ ವರ್ಷ ತುಂಬದ ಮೀನಾಳಿಗೆ ಈಕೆಯನ್ನು ಕಾಡಿ, ಬೇಡಿ ಪ್ರೀತಿಸುತ್ತಿದ್ದ ೩೨ ವರ್ಷದ ಪ್ರಕಾಶ್ ಜತೆ ಮೀನಾಳ ಮನೆಯಲ್ಲಿ ನಿಶ್ಚಿತಾರ್ಥ ನಡೆಯುತ್ತಿತ್ತು. ತಾನು ಪ್ರತಿ ದಿನ ೫ ಕಿಮೀ ನಡೆದು, ಕಷ್ಟಪಟ್ಟು ಓದಿ ಬರೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಏನಾಗಿರಬಹುದು ಎನ್ನುವ ಸಹಜ ಕುತೂಹಲವೂ ಇಲ್ಲದೆ ಪ್ರಕಾಶನ ನಿಶ್ಚಿತಾರ್ಥದ ಹೂವಿನ ಹಾರಕ್ಕೆ ಮೀನಾ ಕೊರಳೊಡ್ಡಿದ್ದಳು.
ತುಂಬಾ ಸರಳವಾಗಿ ತೀರಾ ಹತ್ತಿರದವರ ಸಮ್ಮುಖದಲ್ಲಿ ನಡೆದ ನಿಶ್ಚಿತಾರ್ಥದ ವಿಷಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮುಟ್ಟಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಎರಡೂ ಕಡೆಯವರಿಗೂ ವಿಷಯ ಮನದಟ್ಟು ಮಾಡಿ, ಹುಡುಗಿಗೆ ೧೮ ವರ್ಷ ಆಗುವುದಕ್ಕೂ ಮೊದಲು ಮದುವೆ ಮಾಡಿದರೆ ಆಗುವ ಅನಾಹುತಗಳ ಬಗ್ಗೆ ಮಾಹಿತಿ ನೀಡಿದರು. ಇದರಿಂದ ಮನಸ್ಸು ಬದಲಿಸಿದಂತೆ ಕಂಡು ಬಂದ ಪ್ರಕಾಶ್ ಇನ್ನು ೨ ವರ್ಷ ಕಳೆದು ಮೀನಾಳನ್ನು ಮದುವೆ ಆಗುವುದಾಗಿ ಅಧಿಕಾರಿಗಳಿಗೆ ಭರವಸೆ ನೀಡಿದ.
ಸಂಜೆ ತನಕ ಎಲ್ಲವೂ ಸಹಜವಾಗಿಯೇ ಇತ್ತು. ಪ್ರಕಾಶ್ ಮೀನಾಳ ಮನೆಯವರ ಜತೆಗೂಡಿ ಸಮೀಪದಲ್ಲೇ ಒಂದು ಗೃಹಪ್ರವೇಶಕ್ಕೂ ಹೋಗಿ ಬಂದಿದ್ದ. ಆದರೆ ಸಂಜೆ ಮತ್ತೆ ಮೀನಾಳ ಮನೆಗೆ ಹಿಂತಿರುಗಿದ ಪ್ರಕಾಶ್ ಬಲವಂತದಿAದ ತನ್ನೊಂದಿಗೆ ಕರೆದೊಯ್ಯಲು ನೋಡಿದ್ದಾನೆ. ಆದರೆ ಮೀನಾಳ ತಾಯಿ ಇದಕ್ಕೆ ಆಕ್ಷೇಪಿಸಿದ್ದಾರೆ. ಇದರಿಂದ ಸಿಟ್ಟಾದ ಪ್ರಕಾಶ್ ಅಲ್ಲಿಯೇ ಇದ್ದ ಕತ್ತಿ ತೆಗೆದು ಅವರ ಕೈ ಕಡಿದಿದ್ದಾನೆ. ನಂತರ ಸುಮಾರು ೧೦೦ ಮೀ. ದೂರಕ್ಕೆ ಮೀನಾಳನ್ನು ಎಳೆದು ತಂದು ಆಕೆಯ ಕೊರಳು ಕತÀ್ತರಿಸಿ ತಲೆಯೊಂದಿಗೆ ಪರಾರಿ ಆಗಿದ್ದಾನೆ.
ಸಂಜೆ ಸುಮಾರು ೫.೩೦ರ ಹೊತ್ತಿಗೆ ಈ ಘಟನೆ ನಡೆದಿದ್ದರೂ ಹೊರ ಜಗತ್ತಿಗೆ ಗೊತ್ತಾಗಲು ರಾತ್ರಿ ೧೦ ಗಂಟೆ ಆಗಿದೆ. ಇದು ಕುಗ್ರಾಮ.ಸರಿಯಾದ ಮೊಬೈಲ್ ಸಂಪರ್ಕವೂ ಇಲ್ಲಿಲ್ಲ. ಹಾಗಾಗಿ ಪೊಲೀಸರಿಗೆ ಮಾಹಿತಿ ಸಿಕ್ಕು ಅವರು ಸ್ಥಳಕ್ಕೆ ತಲುಪುವ ವೇಳೆ ಆರೋಪಿ ಪ್ರಕಾಶ್ ಆಲಿಯಾಸ್ ಓಂಕಾರಪ್ಪ ಆಲಿಯಾಸ್ ಪಾಪು ಕತ್ತಲಲ್ಲಿ ಪರಾರಿ ಆಗಿದ್ದ.
ಮೀನಾಳನ್ನು ಪ್ರಕಾಶ್ ಬಹು ಹಿಂದಿನಿAದಲೇ ಪ್ರೀತಿಸುತ್ತಿದ್ದ. ಈ ಪ್ರೀತಿಗೆ ಮೀನಾಳ ಮನೆಯವರ ಸಹಮತವೂ ಇತ್ತು ಎನ್ನಲಾಗಿದೆ. ಆಕೆಯನ್ನು ಶಾಲೆಗೂ ಈತ ಕರೆದುಕೊಂಡು ಬರುತ್ತಿದ್ದ. ಇದಕ್ಕೆ ಶಿಕ್ಷಕರು ಆಕ್ಷೇಪಿಸಿದಾಗ ನಾನೇ ಆಕೆಯ ಪಾಲಕ ಎಂದು ಹೇಳುತ್ತಿದ್ದ. ಬಾಲಕಿಯೊಬ್ಬಳ ಜತೆಗೆ ಸಾರ್ವಜನಿಕವಾಗಿ ಇಂಥ ವರ್ತನೆಯನ್ನು ಗ್ರಾಮಸ್ಥರು ಕೂಡ ವಿರೋಧಿಸಿದ್ದರು. ವಿಷಯವನ್ನು ಗ್ರಾಮ ಪಂಚಾಯಿತಿ ಗಮನಕ್ಕೂ ತಂದಿದ್ದರು. ಪ್ರಕಾಶ್‌ಗೆ ಕರೆದು ಬುದ್ಧಿವಾದ ಹೇಳುವಂತೆ ಊರಿನ ಮುಖಂಡರಲ್ಲೂ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ.
ಬೆಂಗಳೂರಿನಲ್ಲಿ ಗನ್‌ಮ್ಯಾನ್ ಆಗಿದ್ದ ಪ್ರಕಾಶ್ ಹಿಂತಿರುಗಿ ಊರಿಗೆ ಬಂದ ನಂತರ ಸಿಕ್ಕ ಸಿಕ್ಕಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಎನ್ನುತ್ತಾರೆ ಸ್ಥಳೀಯರು. ಆದರೆ ಪ್ರತಿ ದಿನವೂ ಮೀನಾಳ ಬೆನ್ನು ಬೀಳುವುದು ಬಿಡುತ್ತಿರಲಿಲ್ಲ. ಈತನ ವರ್ತನೆಯಿಂದ ಮೀನಾ ಮಾನಸಿಕವಾಗಿ ಹಿಂಸೆ ಅನುಭವಿಸುವಂತೆ ಕಂಡುಬರುತ್ತಿತ್ತು. ಆದರೆ ಹೇಳಿಕೊಳ್ಳಲಾಗದೇ ನರಳುತ್ತಿದ್ದಳು ಎನ್ನುವುದು ಗ್ರಾಮಸ್ಥರ ಮಾತು.
ಮೂವರು ಸಹೋದರಿಯರು, ಇಬ್ಬರು ಸಹೋದರರನ್ನು ಹೊಂದಿರುವ ಮೀನಾ ಕಲಿಕೆಯಲ್ಲಿ ಅಷ್ಟೇನು ಮುಂದೆ ಇರಲಿಲ್ಲ. ೮ನೇ ತರಗತಿ ತನಕವೂ ಭಾಷೆ ಕಲಿಯಲೂ ಕಷ್ಟಪಡುತ್ತಿದ್ದಳು ಎನ್ನುತ್ತಾರೆ ಈಕೆಯ ಶಿಕ್ಷಕರು. ಆದರೆ ಎಸ್‌ಎಸ್‌ಎಲ್‌ಸಿಗೆ ಬಂದ ನಂತರ ಕಲಿಯುವುದಕ್ಕೆ ಆಸಕ್ತಿ ತೋರಿಸುತ್ತಿದ್ದಳು.
ಹಿಂದಿನ ವರ್ಷ ಸೂರ್ಲಬ್ಬಿ ಸರ್ಕಾರಿ ಪ್ರೌಢ ಶಾಲೆಗೆ ಶೇ. ೧೦೦ ಫಲಿತಾಂಶ ಬಂದಿತ್ತು. ಹಾಗಾಗಿ ಈ ವರ್ಷವೂ ಅದನ್ನು ಮುಂದುವರಿಸಲು ನಿರ್ಣಯ ತೆಗೆದುಕೊಂಡಿದ್ದ ಶಿಕ್ಷಕ ವೃಂದ ಶಾಲೆಯ ಏಕಮಾತ್ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮೇಲೆ ಹೆಚ್ಚು ಕಾಳಜಿ ತೋರಿಸುತ್ತಿದ್ದರು. ಸತತ ಗೈರು ಹಾಜರಾದರೆ ಆಕೆಯ ಮನೆಗೆ ತೆರಳಿ ಮನವೊಲಿಸಿ ಕರೆತರುತ್ತಿದ್ದರು.
ಕ್ರೀಡೆಯಲ್ಲೂ ಈಕೆ ಮುಂದಿದ್ದಳು. ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದ್ದಳು. ಮುಂದೆಯೂ ಓದುವ ಆಸಕ್ತಿ ಇತ್ತು. ಪರೀಕ್ಷೆಗಳು ಮುಗಿದರೂ ಶಾಲೆಗೆ ಬರುವ ಉತ್ಸಾಹ ತೋರಿಸುತ್ತಿದ್ದಳು ಎಂದು ನೆನಪಿಸಿಕೊಳ್ಳುತ್ತಾರೆ ಶಿಕ್ಷಕರು.
ಶಾಲೆಗೆ ಸತತವಾಗಿ ಶೇ.೧೦೦ ಫಲಿತಾಂಶ ಬಂದ ಖುಷಿಯಲ್ಲಿ ಊರಿಗೆ ಊರೇ ಸಿಹಿ ಹಂಚಿ ಸಂಭ್ರಮ ಪಡುವ ಸಮಯದಲ್ಲಿ ಬಂದೆರಗಿದ ಆಘಾತಕಾರಿ ಸುದ್ದಿಯಿಂದ ಶಾಲಾ ಶಿಕ್ಷಕರು ಇನ್ನೂ ಹೊರಬಂದಿಲ್ಲ. ಗ್ರಾಮಸ್ಥರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಮೀನಾ ಹತ್ಯೆ ಮಾಡಿದ ಆರೋಪಿ ಪ್ರಕಾಶ್ ಆದಷ್ಟು ಬೇಗ ಪೊಲೀಸರಿಗೆ ಸಿಕ್ಕಲಿ. ಆತನ ಆರೋಪ ಸಾಬೀತಾಗಿ ಶಿಕ್ಷೆಯಾಗಲಿ ಎನ್ನುವ ನಿರೀಕ್ಷೆಯಲ್ಲಿ ಗ್ರಾಮಸ್ಥರು ಇದ್ದಾರೆ.

ಸಂಭ್ರಮ ಹಂಚಿಕೊಳ್ಳೋಣ ಎಂದರೆ ಶಾಲೆಗೆ ಶೇ. ೧೦೦ ಫಲಿತಾಂಶ ಬರಲು ಕಾರಣಳಾದ ಮೀನಾಳೇ ಇಂದು ನಮ್ಮೊಂದಿಗಿಲ್ಲ. ನನ್ನ ೩೫ ವರ್ಷದ ವೃತ್ತಿ ಜೀವನದಲ್ಲಿ ಇದೊಂದು ಅತ್ಯಂತ ಕೆಟ್ಟ ಘಟನೆ. ಏಕ ಮಾತ್ರ ವಿದ್ಯಾರ್ಥಿ ಎನ್ನುವ ಕಾರಣಕ್ಕೆ ಆಕೆಯ ಜತೆ ನಮ್ಮೆಲ್ಲರ ಒಡನಾಟ ಚೆನ್ನಾಗಿತ್ತು. ನಮ್ಮ ಕುಟುಂಬದವಳAತೆ ಆಕೆಯನ್ನು ನೋಡಿಕೊಳ್ಳುತ್ತಿದ್ದೆವು. ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿಯನ್ನು ಕಳೆದುಕೊಂಡಿz್ದೆÃವೆ.
| ರವೀಂದ್ರ ತಿಮ್ಮಪ್ಪ ಅಂಡರದಾನಿ, ಮುಖ್ಯ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಸೂರ್ಲಬ್ಬಿ

ಹುಡುಗನಿಗೆ ೩೨ ವರ್ಷ. ಬಾಲಕಿಗೆ ೧೬ ವರ್ಷ ಇವರಿಬ್ಬರ ಪ್ರೀತಿಗೆ ಮನೆಯವರ ಸಹಮತವೂ ಇತ್ತು. ಈ ಹುಡುಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಲು ಕೂಡ ಹೋಗಿರಲಿಲ್ಲ. ಬಾಲಕಿ ಜತೆಗೆ ಈ ರೀತಿ ವರ್ತಿಸದಂತೆ ಊರಿನವರು ಪ್ರಕಾಶ್‌ಗೆ ಬುದ್ಧಿ ಹೇಳಿದ್ದರು. ಪಂಚಾಯಿತಿ ಗಮನಕ್ಕೂ ತರಲಾಗಿತ್ತು. ಪಂಚಾಯಿತಿಯ ಹಿರಿಯರು ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಂಡಿದ್ದರೆ ಇಂಥ ದುರ್ಘಟನೆ ನಡೆಯುತ್ತಿರಲಿಲ್ಲ.
| ಜಯಂತಿ, ಸಂಚಾಲಕಿ, ರೈತಸಂಘ, ಕುಂಬಾರ ಗಡಿಗೆ-ಸೂರ್ಲಬ್ಬಿ