ರಾಘವೇಂದ್ರ ಪೈ ಕುಂದಾಪುರ
ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊವಾಡಿ ಸೇತುವೆಯಿಂದ ಮೊವಾಡಿ ಎಸ್.ಸಿ.ಕಾಲೋನಿಗೆ ಹೋಗುವ ಕಾಂಕ್ರೀಟ್ ರಸ್ತೆಯ ಅಲ್ಲಲ್ಲಿ ಹೊಂಡಗಳು ಬಿದ್ದಿದ್ದು, ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆ.
ತ್ರಾಸಿ ಗ್ರಾ.ಪಂ. ವ್ಯಾಪ್ತಿಯ ಮೊವಾಡಿ ಸೇತುವೆಯಿಂದ ಮೊವಾಡಿ ಎಸ್.ಸಿ.ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ ಮತ್ತು ನಾಡ ಗ್ರಾಪಂ ಕಚೇರಿಯಿಂದ ಇಗರ್ಜಿ ಗುಡ್ಡೆ ಎಸ್.ಸಿ.ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿಗೆ 2021-22ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್‌ಸಿಪಿ ಯೋಜನೆಯಡಿ 1 ಕೋಟಿ ರೂ. ಮಂಜೂರಾಗಿ 2022-23ನೇ ಸಾಲಿನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿತ್ತು.
ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡ ಒಂದೇ ವರ್ಷದಲ್ಲಿ ರಸ್ತೆಯ ಬಹುತೇಕ ಕಡೆಗಳಲ್ಲಿ ಜಲ್ಲಿಗಳು ಎದ್ದು ಬರುತ್ತಿದ್ದರೆ, ಅನೇಕ ಕಡೆ ಹೊಂಡಗಳಾಗಿವೆ. ಇದಕ್ಕೆ ಕಳಪೆ ಕಾಮಗಾರಿ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಮೊವಾಡಿ ಸೇತುವೆ ನಿರ್ಮಾಣಗೊಂಡ ಬಳಿಕ ನಾಡ-ಗುಡ್ಡೆಯಂಗಡಿ ಮೂಲಕ ಕುಂದಾಪುರಕ್ಕೆ ತೆರಳುವ ವಾಹನಗಳು ಮೊವಾಡಿ ಮೂಲಕ ತೆರಳುತ್ತಿದ್ದು, ಮೊವಾಡಿ ರಸ್ತೆಯಲ್ಲಿ ವಾಹನ ಸಂಚಾರ ಸಹಜವಾಗಿ ಹೆಚ್ಚಾಗಿತ್ತು. ಆದರೆ ಮೊವಾಡಿ ಸೇತುವೆಯಿಂದ ಮೊವಾಡಿ ಎಸ್.ಸಿ. ಕಾಲೋನಿಗೆ ಹೋಗುವ ಒಂದು ಕಿ.ಮೀ. ಉದ್ದದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಿಕ್ಷಾ ಮತ್ತಿತರ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಈ ಭಾಗದ ಜನರು ವಾಹನ ಸಂಚಾರವಿಲ್ಲದೆ ತೊಂದರೆ ಅನುಭವಿಸುತ್ತಿದ್ದರು.
ರಸ್ತೆಗಾಗಿ ಪ್ರತಿಭಟನೆ ನಡೆಸಿದ್ದರು: ರಸ್ತೆ ಅಭಿವೃದ್ಧಿಪಡಿಸಬೇಕೆಂಬ ದಶಕಗಳ ಹಿಂದಿನ ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದ್ದು. ಅಂದಿನ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಸ್ಥಳೀಯರ ಪ್ರತಿಭಟನೆ ಹಾಗೂ ಶಾಸಕರ ಭರವಸೆಯಂತೆ ಮೊವಾಡಿ ರಸ್ತೆ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಯಾಯಿತು.
ದೀರ್ಘಕಾಲ ಬಾಳಿಕೆ ಬರಬೇಕಾಗಿದ್ದ ಕಾಂಕ್ರೀಟ್ ರಸ್ತೆ ಒಂದೇ ವರ್ಷದಲ್ಲಿ ಹಾಳಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಹಲವೆಡೆ ಸಿಮೆಂಟ್ ಮೇಲೆದ್ದು ಜಲ್ಲಿ ಕಲ್ಲುಗಳು ಗೋಚರಿಸುತ್ತಿವೆ. ಅನೇಕ ಕಡೆ ಹೊಂಡ ಬಿದ್ದಿದೆ. ಕಳಪೆ ಕಾಮಗಾರಿಯೇ ರಸ್ತೆ ಅವ್ಯವಸ್ಥೆಗೆ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಮೊವಾಡಿ ಸೇತುವೆಯಿಂದ ಎಸ್.ಸಿ.ಕಾಲೋನಿ ಸಂಪರ್ಕಿಸುವ par ಮಾರ್ಗ- ದಶಕದ ಬೇಡಿಕೆ, ಹೋರಾಟದ ಫಲವಾಗಿ ನಿರ್ಮಾಣಗೊಂಡಿದ್ದ ಕಾಂಕ್ರೀಟ್ par ರಸ್ತೆ- ಅಭಿವೃದ್ಧಿಯಾದ ವರ್ಷದಲ್ಲೇ ಹಾಳಾಗಿರುವ ರಸ್ತೆ- ಕಳಪೆ ಕಾಮಗಾರಿ ಆರೋಪ, ತನಿಖೆಗೆ ಸ್ಥಳೀಯರ ಆಗ್ರಹ
ಮೊವಾಡಿ ಸೇತುವೆಯಿಂದ ಮೊವಾಡಿ ಎಸ್.ಸಿ. ಕಾಲೋನಿಗೆ ಹೋಗುವ ಕಾಂಕ್ರೀಟ್ ರಸ್ತೆಯಯಲ್ಲಿ ಹೊಂಡ ಬಿದ್ದಿರುವುದು ಗಮನಕ್ಕೆ ಬಂದಿಲ್ಲ. ಮೊವಾಡಿ ರಸ್ತೆ ಕಾಮಗಾರಿಯನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಕಳಪೆ ಕಾಮಗಾರಿ ನಡೆದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮೂರ್ತಿ ಎಂ.ಪಿ, ಜೆಇ, ಲೋಕೋಪಯೋಗಿ ಇಲಾಖೆ, ಕುಂದಾಪುರ https://www.vijayavani.net/dilapidated-postmortem-building https://www.vijayavani.net/hebri-does-not-currently-have-a-water-problem