ಜಿಲ್ಲೆ

ಗ್ರ್ಯಾಚುಟಿ, ರಜೆ ನಗದೀಕರಣ ಹಣ ಕೊಡಿ

Dharwad

ಹುಬ್ಬಳ್ಳಿ: ಗ್ರ್ಯಾಚುಟಿ ಹಾಗೂ ರಜೆ ನಗದೀಕರಣದ ಹಣ ನೀಡುವಂತೆ ಆಗ್ರಹಿಸಿ ವಾಕರಸಾ ಸಂಸ್ಥೆಯ ನಿವೃತ್ತ ನೌಕರರು, ನಗರದ ಕೇಂದ್ರ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ಕಳೆದ 2 ವರ್ಷಗಳಿಂದ ಹಣ ಕೊಟ್ಟಿಲ್ಲ. ಮಕ್ಕಳ ಉನ್ನತ ಅಭ್ಯಾಸ, ಕುಟುಂಬ ನಿರ್ವಹಣೆ ಅಸಾಧ್ಯವಾಗಿದೆ. ಈಗಾಗಲೇ ಹಲವಾರು ಬಾರಿ ಪ್ರತಿಭಟನೆ, ಸತ್ಯಾಗ್ರಹ ನಡೆಸಿದರೂ ಸಂಸ್ಥೆ ಹಣ ನೀಡಿಲ್ಲ. ನಾವು ದುಡಿದ ಹಣ ನಮಗೆ ಕೊಡಲು ಸತಾಯಿಸುತ್ತಿದ್ದಾರೆ. ಸಂಸ್ಥೆಯ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಉದ್ದೇಶಪೂರ್ವಕವಾಗಿ ನಮಗೆ ಕಿರುಕುಳ ನೀಡುತ್ತಿದ್ದಾರೆ. ಕೂಡಲೆ, ನ. 12ರೊಳಗೆ ಈ ಮೊತ್ತ ಪಾವತಿಸಬೇಕು. ಇಲ್ಲವಾದರೆ ಕುಟುಂಬ ಸಮೇತ ಕೇಂದ್ರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ‘ಸಾರಿಗೆ ಸಂಸ್ಥೆಯ ನಿವೃತ್ತ ಕಾರ್ವಿುಕರಿಗೆ ಹಣ ಕೊಟ್ಟು ಬದುಕಲು ಬಿಡಿ, ಇಲ್ಲವೇ ಕುಟುಂಬ ಸಮೇತ ಸಾಯಲು ಅನುಮತಿ ಕೊಡಿ’ ಎಂದು ಒತ್ತಾಯಿಸಿದ ಮನವಿಯನ್ನು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ರವಾನಿಸಲಾಯಿತು. ನಿವೃತ್ತ ನೌಕರರಾದ ಎಚ್.ಎಲ್. ದೊಡ್ಡಮನಿ, ಎಂ.ಕೆ. ನರಗುಂದ, ಬಿ.ಎಸ್. ಪೂಜಾರ, ಬಿ.ಎಲ್. ಭಜಂತ್ರಿ, ಎಚ್.ಜಿ. ಪಾಟೀಲ, ವೈ.ವಿ. ಗಾಡಿಖಾನೆ, ಬಿ.ಕೆ. ಹಾಲದಾರ, ಎಚ್.ಕೆ. ಸುಂಕದ ಇತರರಿದ್ದರು.