ಜಿಲ್ಲೆ

ಒಳಮೀಸಲಿನ ಕುರಿತು ರಾಜ್ಯದ ಶಿಫಾರಸಿಗೆ ಸಂಘ, ಸಂಸ್ಥೆಗಳ ಕೃತಜ್ಞತೆ

ಮೈಸೂರು: ಒಳ ಮೀಸಲಾತಿ ಕುರಿತ ಸದಾಶಿವ ಆಯೋಗ ನೀಡಿರುವ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿರುವುದಕ್ಕೆ ಅಖಿಲ ಕರ್ನಾಟಕ ಡಾ.ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ ಪೌರ ಕಾರ್ಮಿಕರ ಜನಾಂಗದ ಅಭಿವೃದ್ಧಿ ಟ್ರಸ್ಟ್‌ನಿಂದ ಧನ್ಯವಾದ ಸಲ್ಲಿಸುವುದಾಗಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುರೇಶ್‌ಕುಮಾರ್ ತಿಳಿಸಿದರು.
ಆದಿದ್ರಾವಿಡ ಒಳ ಮೀಸಲಾತಿ ಕುರಿತಂತೆ 2012 ರಲ್ಲಿ ಮೈಸೂರಿನಿಂದ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. 2022ರಲ್ಲಿ ಆದಿ ದ್ರಾವಿಡ ಸಮಾಜ ಸಮಾವೇಶ ಸಹ ನಡೆಸಲಾಗಿತ್ತು. ಈ ವೇಳೆಯಲ್ಲೇ ಆದಿ ದ್ರಾವಿಡರ ಏಳಿಗೆಗಾಗಿ ಮನವಿ ಸಲ್ಲಿಸಿ, ಹೋರಾಟ ನಡೆಸಲಾಗಿತ್ತು. ಹೀಗಾಗಿ ಇದನ್ನು ಗಮನಿಸಿ ರಾಜ್ಯ ಸರ್ಕಾರ ಈಗ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಇರುವ ಸಣ್ಣಪುಟ್ಟ ಸಮುದಾಯಗಳಿಗೆಲ್ಲ ನಿಗಮ, ಮಂಡಳಿ ಸ್ಥಾಪನೆ ಮಾಡಲಾಗಿದೆ. ಆದರೆ ಆದಿ ದ್ರಾವಿಡರಿಗೆ ಇಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.