ಜಿಲ್ಲೆ

ಕೃತಜ್ಞತೆ ಇಲ್ಲದ ನಾಯಕ ಸಿದ್ದರಾಮಯ್ಯ: ಎಚ್.ವಿಶ್ವನಾಥ್ ವಾಗ್ದಾಳಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೃತಜ್ಞತೆ ಇಲ್ಲದ ನಾಯಕ. ವಚನ ಭ್ರಷ್ಟ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹರಿಹಾಯ್ದರು.


ಖಲೀಮುಲ್ಲಾ ಖಾನ್ ಅವರಿಂದ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ಸಿಕ್ಕಿತು. ಕಾಂಗ್ರೆಸ್‌ನಿಂದ ಹೊರಬಂದಿದ್ದ ಖಲೀಮುಲ್ಲಾ ಖಾನ್ 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಖಲೀಮುಲ್ಲಾ ಖಾನ್ ಕನಿಷ್ಠ 10 ಸಾವಿರ ಮತ ಪಡೆಯುವ ಸಾಧ್ಯತೆಯಿತ್ತು.

ಹೀಗಾಗಿ ಖಲೀಮುಲ್ಲಾ ಖಾನ್ ಬೆಂಬಲಕ್ಕಾಗಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದರು. ಕಾಂಗ್ರೆಸ್‌ನವರು ಮನವಿ ಮಾಡಿದ ಮೇರೆಗೆ ಖಲೀಮುಲ್ಲಾ ಖಾನ್ ಕಾಂಗ್ರೆಸ್ ಬೆಂಬಲಿಸಿದರು. ಆದರೆ, ಸಿದ್ದರಾಮಯ್ಯ 2 ಬಾರಿ ಸಿಎಂ ಆದರೂ ಖಲೀಮುಲ್ಲಾ ಖಾನ್‌ಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಆದ್ದರಿಂದ ಸಿದ್ದರಾಮಯ್ಯ ವಚನಭ್ರಷ್ಟ, ಕೃತಜ್ಞತೆ ಇಲ್ಲದ ನಾಯಕ, ಹತ್ತಿದ ಏಣಿಯನ್ನೇ ಒದೆಯುವ ಗುಂಪಿಗೆ ಸೇರಿದವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮೋದಿ 3ನೇ ಬಾರಿ ಪ್ರಧಾನಿಯಾಗಲಿದ್ದಾರೆ. ದೇಶದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ. ಈ ಬಾರಿ ಅತ್ಯಂತ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದೆ. ಇನ್ನೂ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.


ಎಚ್.ಡಿ.ಕುಮಾರಸ್ವಾಮಿ ಅವರ ‘ದಾರಿ ತಪ್ಪಿದ..’ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನೀವು ಗರ್ಗೇಶ್ವರಿಯಲ್ಲಿ ಮಹಿಳೆ ವೇಲ್ ಎಳೆದಿದ್ದು ಮರೆತು ಹೋಯಿತಾ? ಆಗ ನೀವು ಮಾಡಿದ್ದು ಸರಿಯಾ? ಕುಮಾರಸ್ವಾಮಿ ತಾವು ಆಡಿದ್ದ ಮಾತಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೂಡ ಯಾಚಿಸಿದ್ದಾರೆ. ಆದರೂ ಏಕೆ ಅದೇ ವಿಚಾರ ಮುಂದಿಟ್ಟುಕೊಂಡು ಗಾಯದ ಮೇಲೆ ಹೊಡೆದು ಹೊಡೆದು ದೊಡ್ಡದು ಮಾಡುತ್ತಿದ್ದೀರಾ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.


ವಿಧಾನಪರಿಷತ್‌ಗೆ ನನ್ನನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದಾರೆ. ತಾಂತ್ರಿಕವಾಗಿ ನಾನು ಬಿಜೆಪಿ ಎಂಎಲ್ಸಿಯಾಗಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಕೆಲವೊಮ್ಮೆ ಮೂರು ಪಕ್ಷಗಳ ನಾಯಕರ ಹುಳುಕನ್ನು ಜನರ ಮುಂದಿಟ್ಟಿದ್ದೇನೆ. ಯಾವುದೇ ಮುಲಾಜಿಲ್ಲದೇ ಟೀಕೆ ಮಾಡಿದ್ದೇನೆ ಎಂದು ಹೇಳಿದರು.


ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದವು. ಆಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಅದಕ್ಕೆ ಇದೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವಕಾಶ ನೀಡಲಿಲ್ಲ. ಮೈತ್ರಿ ಧರ್ಮ ಪಾಲಿಸಲಿಲ್ಲ.

ಪರಿಣಾಮ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿ ಸೋತರು. ದೇವೇಗೌಡರ ಸೋಲಿಗೆ ಕಾಂಗ್ರೆಸ್ ನಾಯಕರು ಕಾರಣ. ಆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಕುರುಬ ಸಮುದಾಯದ ಸಿ.ಎಚ್.ವಿಜಯಶಂಕರ್ ಅವರನ್ನು ಸಿದ್ದರಾಮಯ್ಯ ಕಣಕ್ಕಿಳಿಸಿದರು. ಆಗ ಒಕ್ಕಲಿಗರ ಮೇಲೆ ಇಲ್ಲದ ಪ್ರೀತಿ ಈಗ ಏಕೆ ಬಂದಿದೆ ಎಂದು ಪ್ರಶ್ನಿಸಿದರು.


ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪಿಲ್ಲ. ಹೀಗಾಗಿ ಈ ಬಗ್ಗೆ ಶ್ವೇತಪತ್ರ ಹೊರಡಿಸಿದರೆ ಮಾತ್ರ ಎಷ್ಟು ಜನರಿಗೆ ಯೋಜನೆ ತಲುಪಿದೆ ಎಂದು ತಿಳಿಯುತ್ತದೆ ಎಂದು ಹೇಳಿದರು.


ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಪರದಾಡುತ್ತಿದೆ. ಪರಿಣಾಮ ಬಿಯರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲಾಗುತ್ತಿದೆ. ಪುರುಷರ ಬಳಿ ಕಿತ್ತು ಮಹಿಳೆಯರಿಗೆ ನೀಡಲಾಗುತ್ತಿದೆ ಎಂದು ಜರಿದರು.


ಚುನಾವಣಾ ರಾಜಕೀಯದಿಂದ ದೂರವಾಗಿ, ನಾನು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಶ್ರೀನಿವಾಸಪ್ರಸಾದ್ ಹೇಳಿದ್ದಾರೆ. ಆದರೂ ನೀವು ಅವರ ಮನೆಗೆ ಹೋಗಿದ್ದೀರಿ, ನೀವೇನು ಅವರ ವಿಶ್ವಾಸೀನಾ? ಎಂದು ಕುಟುಕಿದರು.