ಬೆಳಗಾವಿ: ಗ್ರಾಮ ಪಂಚಾಯಿತಿಗಳಿಗೆ ನೇಮಕಗೊಳ್ಳುವ ಆಡಳಿತಾಧಿಕಾರಿಗಳಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಸಾಮರ್ಥ್ಯಾಭಿವೃದ್ಧಿ ತರಬೇತಿ ಆರಂಭಿಸಿದೆ.
ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಜು. 6ರಿಂದಲೇ ತರಬೇತಿ ಆರಂಭಗೊಂಡಿದ್ದು, ಜು. 14ರ ವರೆಗೆ ನಡೆಯಲಿದೆ. ಆಡಳಿತಾಧಿಕಾರಿಗಳಿಗೆ ಎರಡು ದಿನಗಳ ಅವಧಿಗೆ ಉಪಗ್ರಹ ಆಧಾರಿತ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ರಾಮದುರ್ಗ-12, ಹುಕ್ಕೇರಿ- 14, ಖಾನಾಪುರ- 10, ರಾಯಬಾಗ- 10, ಚಿಕ್ಕೋಡಿ- 11, ಅಥಣಿ-10, ಕಾಗವಾಡ- 3, ನಿಪ್ಪಾಣಿ-7, ಮೂಡಲಗಿ-5, ಬೈಲಹೊಂಗಲ-10, ಗೋಕಾಕ-13, ಬೆಳಗಾವಿ-12, ಸವದತ್ತಿ-16 ಹಾಗೂ ಕಿತ್ತೂರು-4
ಸೇರಿದಂತೆ ಒಟ್ಟು 137 ಆಡಳಿತಾಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಅಧೀನ ಕಾರ್ಯದರ್ಶಿ ಬಿ. ನವೀನಕುಮಾರ್ ಅವರು ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ರೀತಿಯ ಹಣಕಾಸು ವ್ಯವಹಾರ ನಡೆಸುವಂತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ, ತಾಲೂಕು ಪಂಚಾಯಿತಿ ಇಒ ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ನೇಮಕಗೊಂಡಿರುವ ಆಡಳಿತಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.