ಜಿಲ್ಲೆ

ಭರಣಿ ಮಳೆ ಆರ್ಭಟಕ್ಕೆ ದ್ರಾಕ್ಷಿ ನೆಲಸಮ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪರಿಶೀಲನೆ, ಹಲವೆಡೆ ಮರಗಳು ಬುಡಮೇಲು

Bengaluru Rural

ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೆ ಎಡೆಬಿಡದೆ ಸುರಿದ ಭರಣಿ ಮಳೆಗೆ ರೈತರು ತತ್ತರಿಸಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಸೂಕ್ತ ಮಾರುಕಟ್ಟೆಯಿಲ್ಲದೆ ಕಂಗಾಲಾಗಿದ್ದ ದ್ರಾಕ್ಷಿ, ಮಾವು ಮತ್ತಿತರ ತೋಟಗಾರಿಕೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಿದೆ.

ಜಿಲ್ಲೆಯಲ್ಲಿ ಒಟ್ಟಾರೆ 8.1 ಹೆಕ್ಟೇರ್ ಬೆಳೆ ನಾಶವಾಗಿರುವ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಮುರುಗೋಡು ಹಾಗೂ ಅಧಿಕಾರಿಗಳ ತಂಡ ಬುಧವಾರ ವಿವಿಧ ಕಡೆಗಳಲ್ಲಿ ಬೆಳೆಹಾನಿ ಪರಿಶೀಲಿಸಿದೆ.

1.10 ಎಕರೆ ದ್ರಾಕ್ಷಿ ನೆಲಸಮ: ದೇವನಹಳ್ಳಿ ತಾಲೂಕು ವೆಂಕಟಗಿರಿ ಗ್ರಾಮದಲ್ಲಿ ರೈತ ದೇವರಾಜು ಎಂಬುವವರು 1.10 ಎಕರೆಯಲ್ಲಿ ಬೆಳೆದಿದ್ದ ದಿಲ್‌ಕುಶ್ ತಳಿಯ ದ್ರಾಕ್ಷಿ ಸಲು ಕಂಬಗಳು ಮುರಿದಿದ್ದರಿಂದ ನೆಲಕಚ್ಚಿದೆ. ಅಧಿಕಾರಿಗಳು ಪರಿಶೀಲಿಸಿದ್ದು, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಧಾರಾಕಾರ ಮಳೆ: ಹೊಸಕೋಟೆ ತಾಲೂಕಿನಲ್ಲಿ 6 ಸೆ.ಮೀ ಮಳೆಯಾಗಿದೆ. ಅದೇ ರೀತಿ ದೇವನಹಳ್ಳಿಯಲ್ಲಿ 3 ಸೆ.ಮೀ, ನೆಲಮಂಗಲ 6 ಸೆ.ಮೀ ಹಾಗೂ ದೊಡ್ಡಬಳ್ಳಾಪುರದಲ್ಲಿ 2.3 ಸೆ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಬುಧವಾರ ಸುರಿದ ಭಾರಿ ಮಳೆಗೆ 8.1 ಹೆಕ್ಟೇರ್‌ನಷ್ಟು ಬೆಳೆಹಾನಿಯಾಗಿದೆ. ಈ ಬಗ್ಗೆ ತಹಸೀಲ್ದಾರ್‌ಗಳಿಗೆ ವರದಿ ಸಲ್ಲಿಸಲಾಗಿದೆ. ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆಯಾಗಲಿದ್ದು, ಸರ್ಕಾರದಿಂದ ಪರಿಹಾರ ಸಿಗಲಿದೆ. ಮಹಾಂತೇಶ್ ಮುರುಗೋಡು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಬೆಂ.ಗ್ರಾ. ಜಿಲ್ಲೆ 3 ವರ್ಷದ ಹಿಂದೆ ಚಪ್ಪರ ಹಾಕಿಸಿದ್ದೆ. ಆಲಿಕಲ್ಲು ಮಳೆಗೆ ಇದೇ ಮೊದಲ ಬಾರಿ ಬೆಳೆದ ದ್ರಾಕ್ಷಿ ಬೆಳೆ ನೆಲಕಚ್ಚಿದೆ. ಖರ್ಚು ಮಾಡಿದ್ದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಷ್ಟ ಪರಿಹಾರಕ್ಕೆ ಸರ್ಕಾರ ಸ್ಪಂದಿಸಬೇಕು. ದೇವರಾಜು, ರೈತ ವೆಂಕಟಗಿರಿ ಗ್ರಾಮ