ಅಥಣಿ: ಅಥಣಿ ತಾಲೂಕು ಪಂಚಾಯಿತಿ ಕಾರ್ಯಾಲಯದಿಂದ ಜೂಮ್ ಆ್ಯಪ್ ಮೂಲಕ ಅಥಣಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳೊಂದಿಗೆ ಶುಕ್ರವಾರ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ವಿಡಿಯೋ ಸಂವಾದ ನಡೆಸಿದರು.
ಕೋವಿಡ್-19 ಸಮಸ್ಯೆಯಿಂದಾಗಿ ಲಾಕ್‌ಡೌನ್ ಆಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಜನರು ಎದುರಿಸುವ ಸಮಸ್ಯೆಗಳನ್ನು ಅಧಿಕಾರಿಗಳಿಂದ ಆಲಿಸಿದರು.ಸಾಧ್ಯವಿದ್ದಷ್ಟು ಸ್ಥಳೀಯವಾಗಿ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ವಚ್ಛತೆ ಇದ್ದಲ್ಲಿ ಆರೋಗ್ಯ ನೆಲೆಸಲು ಸಾಧ್ಯವಿದೆ. ಹಾಗಾಗಿ ಗ್ರಾಮ ಪಂಚಾಯಿತಿಗಳು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದರು. ಅಥಣಿ ತಾಲೂಕಿನ ಗ್ರಾಮಗಳಲ್ಲಿ ಪ್ರತಿ ಬಿಪಿಎಲ್ ಕುಟುಂಬದಾರರಿಗೆ ಪಡಿತರ ವಿತರಿಸಬೇಕು. ಕಾಯಿಲೆ ಪೀಡಿತ ಹಿರಿಯ ನಾಗರಿಕರು, ಹೋಂ
ಕ್ವಾರಂಟೈನ್‌ನಲ್ಲಿದ್ದವರು, ಅವಧಿ ಮುಗಿದವರ ಮಾಹಿತಿ ಪಡೆದರು. ನಂದೇಶ್ವರ, ಸತ್ತಿ, ಮಹಿಷವಾಡಗಿ, ಜನವಾಡ, ಸವದಿ, ರಡ್ಡೇರಹಟ್ಟಿ, ಹಲ್ಯಾಳ, ದರೂರ, ಸಂಕೋನಟ್ಟಿ, ಖವಟಕೊಪ್ಪ, ಶೇಗುಣಸಿ ಗ್ರಾಪಂ ಅಧ್ಯಕ್ಷರು ಸಂವಾದದಲ್ಲಿ ಪಾಲ್ಗೊಂಡರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ, ತಹಸೀಲ್ದಾರ್ ದುಂಡಪ್ಪ ಕೋಮಾರ, ತಾಪಂ ಇಒ ರವಿ ಬಂಗಾರೆಪ್ಪನವರ, ಕೃಷಿ ಇಲಾಖೆ ಉಪ-ನಿರ್ದೇಶಕಿ ಜಯಶ್ರೀ ಹಿರೇಮಠ, ಈರಣ್ಣ ವಾಲಿ ಇತರರಿದ್ದರು.
ಮಹಾಮಾರಿ ಕರೊನಾ ವೈರಸ್ ಹೋಗಲಾಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಂತೆ ನಡೆಯೋಣ. ಎಲ್ಲರೂ ಸ್ವಯಂಪ್ರೇರಿತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಈ ಹೋರಾಟದಲ್ಲಿ ಜಯ ಸಾಧಿಸೋಣ.| ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ