ಸೋಮವಾರಪೇಟೆ: ಐದು ಗ್ಯಾರಂಟಿಗಳೊಂದಿಗೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೂ ಹೆಚ್ಚಿನ ಹಣವನ್ನು ಸರ್ಕಾರ ಬಿಡುಗಡೆಗೊಳಿಸುತ್ತಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಹೊಸ ಮಾರ್ಗದಲ್ಲಿ ಸಂಚರಿಸುವ ಮೂರು ಬಸ್‌ಗಳ ಸಂಚಾರಕ್ಕೆ ಸೋಮವಾರ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿಗಳು ಜನಕಲ್ಯಾಣ ಯೋಜನೆಗಳಾಗಿದ್ದು, ನಿಜವಾದ ಫಲಾನುಭವಿಗಳಿಗೆ ತಲುಪುತ್ತಿವೆ. ಅದು ಜನರ ಅಭಿವೃದ್ಧಿಗೆ ನೀಡುವ ಅನುದಾನವಾಗಿದೆ. ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆ ಶೇ.100 ರಷ್ಟು ಯಶಸ್ವಿಯಾಗಲು ಗ್ಯಾರಂಟಿ ಅನುಷ್ಠಾನ ಸಮಿತಿಯವರು ಶ್ರಮ ಪಡುತ್ತಿದ್ದಾರೆ ಎಂದರು.
ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದ ನಂತರ ಕೊಡಗಿನಲ್ಲಿ 500 ಕೋಟಿ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಸರ್ಕಾರ ಅದರ ಹಣವನ್ನು ಕೆಎಸ್‌ಆರ್‌ಟಿಸಿಗೆ ಭರಿಸಿದೆ ಎಂದು ಹೇಳಿದರು.
ಮಳೆಗಾಲದಲ್ಲಿ ಹಾರಂಗಿ ಡ್ಯಾಂನ ನೀರನ್ನು ಬಿಟ್ಟಾಗ ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಕೆಲ ದಿನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ನನ್ನ ಮನವಿ ಮೇರೆಗೆ ನೂತನ ಸೇತುವೆಗೆ ರಾಜ್ಯ ಸರ್ಕಾರ 36 ಕೋಟಿ ರೂ. ಬಿಡುಗಡೆಗೊಳಿಸಿದೆ. ಇನ್ನು ನಾಲೆಗಳ ದುರಸ್ತಿಗೆ 49 ಕೋಟಿ ರೂ.ಗಳಿಗೆ ಸದ್ಯದಲ್ಲೇ ಅನುಮೋದನೆ ಸಿಗಲಿದೆ ಎಂದು ಹೇಳಿದರು.
ಮೂರು ಬಸ್‌ಗಳ ಜತೆಗೆ ಹೆಚ್ಚಿನ ಬಸ್‌ಗಳಿಗಾಗಿ ಸಾರಿಗೆ ಮಂತ್ರಿಗಗಳಿಗೆ ಬೇಡಿಕೆ ಇಡಲಾಗಿದೆ. ಬೆಂಗಳೂರಿಗೆ ತೆರಳಲು ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುವ ಭರವಸೆಯನ್ನು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಶಾಂತಳ್ಳಿ, ಕೂತಿ, ಮಾರ್ಗವಾಗಿ ಸುಬ್ರಮಣ್ಯಕ್ಕೆ ಹಾಗು ಹಾನಗಲ್ಲು, ತಲ್ತಾರೆ ಮಾರ್ಗವಾಗಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಾಗೂ ಡಾ.ಮಂತರ್‌ಗೌಡ ಶಾಸಕರಾದ ಮೇಲೆ ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಮಂತರ್‌ಗೌಡ ಅವರ ಪ್ರಯತ್ನದ ಫಲವಾಗಿ ಮಡಿಕೇರಿಯಿಂದ ಸಕಲೇಶಪುರ ದೋಣಿಗಲ್‌ತನಕ ರಾಜ್ಯ ಹೆದ್ದಾರಿಗೆ 970 ಕೋಟಿ ರೂ. ಬಿಡುಗಡೆಯ ಹಂತದಲ್ಲಿದೆ. ಜನರ ಹಲವು ದಶಕಗಳ ಬೇಡಿಕೆಯಂತೆ ಕುಶಾಲನಗರ ಬಸ್ ಡಿಪೋ ಹಾಗು ಶನಿವಾರಸಂತೆಯಲ್ಲಿ ಬಸ್ ನಿಲ್ದಾಣಕ್ಕೆ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಬಿ.ಬಿ.ಸತೀಶ್, ಕೆ.ಎಂ.ಲೋಕೇಶ್, ಶೀಲಾ ಡಿಸೋಜ, ಎಚ್.ಆರ್.ಸುರೇಶ್, ಕೆ.ಎ.ಆದಂ, ಎಂ.ಎ.ರುಬಿನಾ, ತೆನ್ನಿರ ಮೈನಾ, ಬಿ.ಇ.ಜಯೇಂದ್ರ, ಡಿ.ಯು.ಕಿರಣ್, ವಿ.ಎ.ಲಾರೆನ್ಸ್, ಎಸ್.ಎಂ.ಡಿಸಿಲ್ವಾ, ಸುಶೀಲಾ ಹಾನಗಲ್, ಪಾವನ, ಉಲ್ಲಾಸ್, ಮಡಿಕೇರಿ ಘಟಕದ ಸಂಚಾರಿ ಅಧೀಕ್ಷಕ ಈರಸಪ್ಪ, ಸಂಚಾರಿ ನಿಯಂತ್ರಕ ಕೆ.ಸಿ.ಸುಬ್ರಮಣಿ ಇದ್ದರು.