ಹೂವಿನಹಡಗಲಿ: ರಾಜ್ಯ ಸರ್ಕಾರ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ಕೃಷ್ಣನಾಯ್ಕ ಆರೋಪಿಸಿದರು.
ಪಟ್ಟಣದ ಕಾಯಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರು ನಾನಾ ಸೌಲಭ್ಯಗಳ ಕೊರತೆಯನ್ನು ಅನಿಭವಿಸುತ್ತಿದ್ದಾರೆ. ಕುಡಿಯುವ ನೀರು, ಶೌಚಗೃಹ, ಚರಂಡಿ ವ್ಯವಸ್ಥೆ, ಶಾಲಾ ಕಟ್ಟಡ ಇನ್ನು ಅನೇಕ ಸಮಸ್ಯೆಗಳು ಇವೆ.
ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಲಭ್ಯ ಮತ್ತು ಎಷ್ಟು ಅನುದಾನಬೇಕು ಎಂಬುದನ್ನು ತಿಳಿಸಲು ಸೂಚನೆ ನೀಡಲಾಗಿತ್ತು. ಈಗಾಲೇ ಅಧಿಕಾರಿಗಳು ವರದಿ ನೀಡಿದ್ದು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ ಎಂದರು.
ಜೆಜೆಎಂ ಕಾಮಗಾರಿ ಪೂರ್ಣವಾಗಿದ್ದರೂ. ಕಳಪೆ ಕಾಮಗಾರಿಯಿಂದ ಜನರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ವೈದ್ಯಾಧಿಕಾರಿಗಳಿಲ್ಲ. ಸರ್ಕಾರ ಲಕ್ಷಾಂತರ ರೂ.ಬಳಸಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದೆ. ಆದರೆ ಸಮರ್ಪಕ ಸಿಬ್ಬಂದಿ ನಿಯೋಜಿಸಿಲ್ಲ. ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಯ ಪೈಪ್ ಅಳವಡಿಸುವ ಕಾಮಗಾರಿ ಕಳಪೆಯಿಂದ ಕೂಡಿದ್ದರಿಂದ ಸಮರ್ಪಕವಾಗಿ ನೀರುತುಂಬಿಸಲು ಸಾಧ್ಯವಾಗುತ್ತಿಲ್ಲ.
ಕ್ಷೇತ್ರದ ಅಭಿವೃದ್ಧಿ ಮಾಡಲು ಸರ್ಕಾರದ ಬಳಿ ಅನುದಾನ ಕೇಳಿದರೂ ಸರ್ಕಾರ ಅನುದಾನ ನೀಡುತ್ತಿಲ್ಲ. ಕೆಕೆಆರ್‌ಡಿಬಿ ಹಾಗೂ ಡಿಎಂಎಫ್ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ, ಮಾಜಿ ಅಧ್ಯಕ್ಷ ಶಿಶಿಧರ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪುರಸಭೆ ಉಪಾಧ್ಯಕ್ಷ ಮಂಜುನಾಥ, ಮಾಜಿ ಅಧ್ಯಕ್ಷ ವಾರದಗೌಸ್ ಮೋಹಿದ್ದೀನ್, ಪುರಸಭೆ ಸದಸ್ಯ ಚಂದ್ರನಾಯ್ಕ, ಪ್ರಮುಖರಾದ ಪರಮೇಶಪ್ಪ, ಪುತ್ರೇಶ್, ಬಿ.ಬಸವರಾಜ ಇತರರಿದ್ದರು.